Thursday, 24 March 2022

ಪಾತಾಳಕ್ಕೆ ಕುಸಿದ ಅರ್ಥವ್ಯವಸ್ಥೆ: ಶ್ರೀಲಂಕಾದಲ್ಲಿ ಆಹಾರಕ್ಕೂ ತೀವ್ರ ಕೊರತೆ


 ಪಾತಾಳಕ್ಕೆ ಕುಸಿದ ಅರ್ಥವ್ಯವಸ್ಥೆ: ಶ್ರೀಲಂಕಾದಲ್ಲಿ ಆಹಾರಕ್ಕೂ ತೀವ್ರ ಕೊರತೆ

ಕೊಲಂಬೊ: ದಾಖಲೆ ಮಟ್ಟಕ್ಕೇರಿದ ಹಣದುಬ್ಬರ, ಗಗನಕ್ಕೇರಿದ ತೈಲ, ಆಹಾರ ಮತ್ತು ದಿನಬಳಕೆ ವಸ್ತುಗಳ ಬೆಲೆ ಹಾಗೂ ಪಾತಾಳಕ್ಕೆ ಕುಸಿದಿರುವ ಅರ್ಥವ್ಯವಸ್ಥೆಯಿಂದ ಕಂಗೆಟ್ಟಿರುವ ಶ್ರೀಲಂಕಾದ ಜನತೆ ಈಗ ಅರೆಹೊಟ್ಟೆಯಲ್ಲಿ ಜೀವನ ಸಾಗಿಸುವ ಪರಿಸ್ಥಿತಿ ಬಂದಿದೆ ಎಂದು ವರದಿಯಾಗಿದೆ.

ಅಂಗಡಿ, ಪೆಟ್ರೋಲ್ ಬಂಕ್ ಹೀಗೆ ಎಲ್ಲೆಡೆಯೂ ಮಾರುದ್ದದ ಸರತಿ ಸಾಲು ಕಂಡುಬರುತ್ತಿದೆ. ದಿನವಿಡೀ ಸರತಿ ಸಾಲಲ್ಲಿ ನಿಂತು ಅಂಗಡಿಯೊಳಗೆ ಪ್ರವೇಶಿಸಿದರೂ ಕೇಳಿದಷ್ಟು ವಸ್ತು ದೊರಕುತ್ತಿಲ್ಲ. ದೈನಂದಿನ ವಸ್ತುಗಳ ತೀವ್ರ ಕೊರತೆ ಇರುವುದರಿಂದ ಇರುವುದನ್ನು ಎಲ್ಲರಿಗೂ ಹಂಚುವ ಅನಿವಾರ್ಯತೆ ಎದುರಾಗಿದೆ. ಈ ಹಿಂದೆ ಮನೆಯಲ್ಲಿ ದಿನಾ ಮಾಡುತ್ತಿದ್ದ ಅಡುಗೆಯ 50%ದಷ್ಟು ಮಾತ್ರ ಮಾಡಲು ಈಗ ಸಾಧ್ಯವಾಗುತ್ತಿದೆ ಎಂದು ಜನತೆ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

    ಆಹಾರ, ಔಷಧಿ, ದಿನಬಳಕೆಯ ವಸ್ತು, ತೈಲ, ಅಡುಗೆ ಅನಿಲ ಇತ್ಯಾದಿ ಎಲ್ಲದರ ಬೆಲೆಯೂ ಗಗನಕ್ಕೇರಿದೆ. ಜನರು ಜೀವನ ನಡೆಸುವುದೇ ದುಸ್ತರವಾಗಿದೆ .ಕೊರೋನ ಸಾಂಕ್ರಾಮಿಕ ವ್ಯಾಪಕವಾಗಿ ಹರಡಿದ ಸಂದರ್ಭದಲ್ಲಿ ಜಾರಿಗೊಂಡ ಲಾಕ್ ಡೌನ್ ನಿಂದಾಗಿ ಪ್ರವಾಸೋದ್ದಿಮೆಯೇ ಪ್ರಮುಖ ಆದಾಯ ಮೂಲವಾಗಿರುವ ದ್ವೀಪರಾಷ್ಟ್ರದ ಅರ್ಥವ್ಯವಸ್ಥೆ ಹದಗೆಟ್ಟಿದೆ. ಜತೆಗೆ ತೆರಿಗೆ ಕಡಿತದ ಕ್ರಮವೂ ಆರ್ಥಿಕ ಹೊರೆಯನ್ನು ಹೆಚ್ಚಿಸಿದೆ. ದೇಶದ ಸೆಂಟ್ರಲ್ ಬ್ಯಾಂಕ್ ನಲ್ಲಿ ವಿದೇಶಿ ವಿನಿಮಯದ ದಾಸ್ತಾನು ಕನಿಷ್ಟ ಮಟ್ಟದಲ್ಲಿರುವುದರಿಂದ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂತರಾಷ್ಟ್ರೀಯ ಸಾಲದ ಹಲವು ಕಂತುಗಳು ಬಾಕಿಯಾಗಿರುವುದರಿಂದ ಮತ್ತಷ್ಟು ಸಾಲ ದೊರಕುವ ಭರವಸೆಯಿಲ್ಲ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ದೇಶದಲ್ಲಿ ಎದುರಾಗಿರುವ ಕೊರತೆಗೆ ಮೂಲಕಾರಣ ಡಾಲರ್ ನ ಕೊರತೆಯಾಗಿದೆ ಎಂದು ಕೊಲಂಬೊದ ಚಿಂತಕರ ವೇದಿಕೆ ಅಡ್ವೊಕಟ ಇನ್‌ಸ್ಟಿಟ್ಯೂಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧನನಾಥ್ ಫೆರ್ನಾಂಡೊ ಹೇಳಿದ್ದಾರೆ. ಫೆಬ್ರವರಿಯಲ್ಲಿ ದೇಶದಲ್ಲಿನ ವಿದೇಶಿ ವಿನಿಮಯ ಸಂಗ್ರಹ ಕೇವಲ 2.31 ಬಿಲಿಯನ್ ಡಾಲರ್‌ನಷ್ಟಿದ್ದರೆ, ಈ ವರ್ಷದೊಳಗೆ ಸುಮಾರು 4 ಬಿಲಿಯನ್ ಡಾಲರ್‌ನಷ್ಟು ಅಂತರಾಷ್ಟ್ರೀಯ ಸಾಲ ಮರುಪಾವತಿಸಬೇಕಿದೆ. ಈ ನಿಟ್ಟಿನಲ್ಲಿ ಚೀನಾ ಮತ್ತು ಭಾರದ ನೆರವನ್ನು ಶ್ರೀಲಂಕಾ ಸರಕಾರ ಕೋರಿದೆ.

 ಆರ್ಥಿಕ ವಿಪತ್ತಿನಿಂದ ಪಾರಾಗಲು ತುರ್ತು ನೆರವು ಒದಗಿಸುವಂತೆ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್)ಗೆ ಮನವಿ ಮಾಡಿರುವುದಾಗಿ ಕಳೆದ ವಾರ ಶ್ರೀಲಂಕಾ ಸರಕಾರ ಹೇಳಿದೆ. ಆದರೆ ಜನಸಾಮಾನ್ಯರಿಗೆ ಜೀವನ ಸಾಗಿಸುವುದೇ ದುಸ್ತರವಾಗಿದೆ. ಅಡುಗೆ ಅನಿಲ ದರ ಹೆಚ್ಚಳದ ಜತೆ ಸೀಮೆಎಣ್ಣೆಯ ಕೊರತೆ ಗಾಯದ ಮೇಲೆ ಬರೆ ಎಳೆದಂತಾಗಿದೆ. 3 ತಿಂಗಳ ಹಿಂದಿನ ಅವಧಿಗೆ ಹೋಲಿಸಿದರೆ ಪೆಟ್ರೋಲ್ ಬೆಲೆ ಲೀಟರ್‌ಗೆ ದುಪ್ಪಟ್ಟಾಗಿದೆ. ಹಾಲಿನ ಪೌಡರ್ ಬೆಲೆ ಹೆಚ್ಚಿರುವುದರಿಂದ ಹೋಟೆಲ್‌ಗಳಲ್ಲಿ ಒಂದು ಕಪ್ ಚಹಾದ ಬೆಲೆ 100 ರೂ.ಗೆ ತಲುಪಿದೆ. ಆದ್ದರಿಂದ ಈ ಹಿಂದೆ ಸೇವಿಸುತ್ತಿದ್ದ ಆಹಾರದ 50% ಆಹಾರ ಸೇವಿಸುವ ಅನಿವಾರ್ಯತೆ ಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.


SHARE THIS

Author:

0 التعليقات: