Sunday, 20 March 2022

ಪಾವಗಡ ಬಸ್ ಅಪಘಾತ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಲಿ: ಯು.ಟಿ.ಖಾದರ್ ಆಗ್ರಹ


 ಪಾವಗಡ ಬಸ್ ಅಪಘಾತ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಲಿ: ಯು.ಟಿ.ಖಾದರ್ ಆಗ್ರಹ

ಪಾವಗಡ: ಪಾವಗಡ ಬಸ್ ಅಪಘಾತ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಲಿ ಎಂದು ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಸರಕಾರವನ್ನು ಒತ್ತಾಯಿಸಿದ್ದಾರೆ.

ತಾಲೂಕಿನ ಪಳವಳ್ಳಿ ಕೆರೆಯಲ್ಲಿ ಶನಿವಾರ ಆರು ಮಂದಿಯ ಸಾವಿಗೆ ಕಾರಣವಾದ ಬಸ್ ಅಪಘಾತದಲ್ಲಿ  ಗಾಯಾಳುಗಳಾಗಿ ಪಾವಗಡ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿನ ಈ ರೀತಿಯ ಪರಿಸ್ಥಿತಿಯನ್ನು ಸರಕಾರ ಕಣ್ತೆರೆದು ನೋಡಬೇಕು ಮತ್ತು ಈ ಘಟನೆಯ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

 ಖಾಸಗಿ ಬಸ್ಸುಗಳ ತಮ್ಮ ಅನುಕೂಲದ ಸಮಯದಲ್ಲಿ ಬಸ್ಸು ಓಡಿಸುತ್ತಾರೆ, ಜನರಿಗೆ ಬೇಕಾದ ಸಮಯದಲ್ಲಿ ಬಸ್ಸನ್ನು ಓಡಿಸುತ್ತಿಲ್ಲ. ಶನಿವಾರ ಎರಡು ಬಸ್ ಸರ್ವೀಸ್ ರದ್ದು ಮಾಡಿರುವ ಕಾರಣ ಒಂದೇ ಬಸ್ಸಿನಲ್ಲಿ ಅಮಿತವಾಗಿ ವಿದ್ಯಾರ್ಥಿಗಳು ಸೇರಿದಂತೆ ಜನರು ಪ್ರಯಾಣಿಸಿದ್ದಾರೆ. ಈ ವೇಳೆ ಬಸ್ ಚಾಲಕ ಮತ್ತು ನಿರ್ವಾಹಕ ಅಜಾಗರೂಕತೆಯಿಂದ ಮತ್ತು ಅತಿ ವೇಗವಾಗಿ ಬಸ್ ಓಡಿಸಿದ್ದಾರೆ. ಈ ವೇಳೆ  ಬಸ್ಸಿನ ಟಾಪ್ ನ ಮೇಲೆ ಕುಳಿತಿದ್ದವರು ಕೆಳಗೆ  ಇಳಿಯುತ್ತೇವೆ  ಎಂದರೂ  ಬಸ್ಸಿನ ಚಾಲಕ ಅದನ್ನು ಗಣನೆಗೆ ತೆಗೆದುಕೊಳ್ಳದೆ ವೇಗವಾಗಿ ಚಲಾಯಿಸಿದ್ದು ಅಪಘಾತಕ್ಕೆ ಪ್ರಮುಖ ಕಾರಣ ಎಂದು ಖಾದರ್ ದೂರಿದರು.

ಆರು ಮಂದಿಯ ಸಾವಿಗೆ ಮತ್ತು ಘಟನೆಗೆ ಕಾರಣವಾದವರ  ಮೇಲೆ  ಪ್ರಮುಖವಾಗಿ ಕಠಿಣ ವಾದ ಕೇಸನ್ನು ದಾಖಲಿಸಬೇಕೆಂದು ಒತ್ತಾಯಿಸಿದರು. 

 ಪಾವಗಡ ತಾಲೂಕಿನಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಸರಕಾರಿ  ಬಸ್ ಗಳಿದ್ದು, ಅವುಗಳು  ಸರಿಯಾಗಿ ಓಡಾಡುತ್ತಿಲ್ಲ. ಇದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಆದ್ದರಿಂದ ಗ್ರಾಮೀಣ ಪ್ರದೇಶಕ್ಕೆ ಸಂಪೂರ್ಣ ಬಸ್ಸು ಸೌಲಭ್ಯವನ್ನು ಕಲ್ಪಿಸಬೇಕೆಂದು ಖಾದರ್‍ ಒತ್ತಾಯ ಮಾಡಿದರು.  

ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಕೆ.ಎಸ್.ಉಗ್ರಪ್ಪ, ಚಂದ್ರಪ್ಪ ಸಹಿತ ಹಲವು ಮುಖಂಡರು ಉಪಸ್ಥಿತರಿದ್ದರು.


SHARE THIS

Author:

0 التعليقات: