ರಸ್ತೆಗುಂಡಿ ವಿಚಾರ: ಬಿಬಿಎಂಪಿ ಇಂಜಿನಿಯರ್ ಗಳನ್ನು ಬದಲಿಸುವಂತೆ ಸರಕಾರಕ್ಕೆ ಸೂಚಿಸುವುದಾಗಿ ಹೈಕೋರ್ಟ್ ಎಚ್ಚರಿಕೆ
ಬೆಂಗಳೂರು: ನಗರದಲ್ಲಿ ರಸ್ತೆಗುಂಡಿ ಮುಚ್ಚಲು ವಿಳಂಬ ಮಾಡುತ್ತಿರುವ ಕಾರಣ ಬಿಬಿಎಂಪಿ ಇಂಜಿನಿಯರ್ ಗಳನ್ನು ಬದಲಿಸಲು ಸರಕಾರಕ್ಕೆ ಸೂಚಿಸಲಾಗುವುದು. ಪೈಥಾನ್ ಯಂತ್ರ ಬಳಕೆಗೆ ಸಂಬಂಧಿಸಿದಂತೆ ಮಾರ್ಚ್ 15ರೊಳಗೆ ಕ್ರಿಯಾ ಯೋಜನೆ ಸಲ್ಲಿಸಿ ಎಂದು ಹೈಕೋರ್ಟ್ ಸೂಚನೆ ನೀಡಿ, ವಿಚಾರಣೆ ಮುಂದೂಡಿತು.
ನಗರದ ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ 2015ರಲ್ಲಿ ವಿಜಯನ್ ಮೆನನ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಎಸ್.ಆರ್ ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ಪೀಠ ಶನಿವಾರದಂದು ವಿಚಾರಣೆ ನಡೆಸಿ, ಪಾಲಿಕೆ ಎಂಜಿನಿಯರ್ ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ನಗರದಲ್ಲಿ ರಸ್ತೆಗುಂಡಿಗಳಿಂದಾಗಿ ಜನ ಸಾಯುತ್ತಿದ್ದು, ಪಾಲಿಕೆ ಸಮಸ್ಯೆಯನ್ನು ಬಗೆಹರಿಸಲು ವಿಫಲವಾಗಿದೆ. ಪಾಲಿಕೆಗೆ ಸಾವಿರಾರು ಕೋಟಿ ರೂಪಾಯಿ ನೀಡಿದರೂ ರಸ್ತೆಗುಂಡಿ ಮುಕ್ತ ನಗರವನ್ನಾಗಿ ಮಾಡಿಲ್ಲ. ಹಾಗಾಗಿ ಇದೇ ರೀತಿ ನಡೆದುಕೊಂಡರೆ ಬಿಬಿಎಂಪಿ ಇಂಜಿನಿಯರ್ ಗಳನ್ನು ಬದಲಿಸಲು ಸರಕಾರಕ್ಕೆ ಸೂಚಿಸುತ್ತೇವೆ ಎಂದು ಪೀಠ ಎಚ್ಚರಿಕೆ ನೀಡಿದೆ.
ವಿಚಾರಣೆ ವೇಳೆ ಹಾಜರಿದ್ದ ಪಾಲಿಕೆ ಮುಖ್ಯ ಆಯುಕ್ತರು ಪೀಠಕ್ಕೆ ಮನವಿ ಮಾಡಿ, “ಹೈಕೋರ್ಟ್ ಆದೇಶದಂತೆ ತ್ವರಿತವಾಗಿ ನಗರದ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚುತ್ತೇವೆ. ರಸ್ತೆ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ, ನಗರದ 182 ರಸ್ತೆಗಳನ್ನು ಪೈಥಾನ್ ಯಂತ್ರ ಬಳಸಿ ಗುಂಡಿಮುಕ್ತ ಮಾಡುತ್ತೇವೆ. ಸಂಚಾರ ದಟ್ಟಣೆ ಹೆಚ್ಚಿರುವ ಕಡೆ ಪೈಥಾನ್ ಯಂತ್ರ ಬಳಸುತ್ತಿದ್ದೇವೆ. ಹೊಸ ಟೆಂಡರ್ಗೆ ಯಾರೂ ಬಿಡ್ ಸಲ್ಲಿಸದ ಕಾರಣ ಪೈಥಾನ್ ಯಂತ್ರಕ್ಕಾಗಿ ಮತ್ತೆ ಟೆಂಡರ್ ಕರೆಯುತ್ತೇವೆ ಎಂದು ಭರವಸೆ ನೀಡಿದರು.
0 التعليقات: