Saturday, 19 March 2022

ರಷ್ಯಾದಿಂದ ಕಚ್ಛಾತೈಲ ಆಮದು ಒಪ್ಪಂದ ಅಂತಿಮಗೊಳಿಸಿದ ಇಂಡಿಯನ್ ಆಯಿಲ್ ಸಂಸ್ಥೆ


ರಷ್ಯಾದಿಂದ ಕಚ್ಛಾತೈಲ ಆಮದು ಒಪ್ಪಂದ ಅಂತಿಮಗೊಳಿಸಿದ ಇಂಡಿಯನ್ ಆಯಿಲ್ ಸಂಸ್ಥೆ

ಹೊಸದಿಲ್ಲಿ: ರಷ್ಯಾದ ತೈಲ ಸಂಸ್ಥೆಯಿಂದ 3 ಮಿಲಿಯನ್ ಬ್ಯಾರೆಲ್ ಕಚ್ಛಾತೈಲವನ್ನು ಆಮದುಗೊಳಿಸುವ ಒಪ್ಪಂದವನ್ನು ಇಂಡಿಯನ್ ಆಯಿಲ್ ಸಂಸ್ಥೆ ಅಂತಿಮಗೊಳಿಸಿದೆ. ಇದು ಸಂಸ್ಥೆ-ಸಂಸ್ಥೆಯ ನಡುವಿನ ವ್ಯವಹಾರ ಒಪ್ಪಂದವಾಗಿದೆ ಎಂದು ಎನ್‌ಡಿಟಿವಿ ಮೂಲಗಳು ಹೇಳಿವೆ.

ಉಕ್ರೇನ್ ಮೇಲಿನ ರಷ್ಯಾ ಆಕ್ರಮಣದ ಹಿನ್ನೆಲೆಯಲ್ಲಿ ರಷ್ಯಾದಿಂದ ತೈಲ ಆಮದಿಗೆ ಅಮೆರಿಕ ಸಹಿತ ಪಾಶ್ಚಿಮಾತ್ಯ ದೇಶಗಳು ನಿರ್ಬಂಧ ವಿಧಿಸಿದ್ದವು. ಆದರೆ ರಷ್ಯಾ ತೈಲ ಸಂಸ್ಥೆಗಳಿಂದ ಕಚ್ಛಾತೈಲ ಖರೀದಿಗೆ ಭಾರತದ ತೈಲ ಸಂಸ್ಥೆಗಳಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ. ಭಾರತದ ಕಾನೂನುಬದ್ಧ ಇಂಧನ ವಹಿವಾಟುಗಳನ್ನು ರಾಜಕೀಯಗೊಳಿಸಬಾರದು. ತೈಲದಲ್ಲಿ ಸ್ವಾವಲಂಬಿಗಳಾಗಿರುವ ದೇಶಗಳು ಅಥವಾ ರಶ್ಯದಿಂದ ತಾವು ಆಮದು ಮಾಡಿಕೊಳ್ಳುವ ದೇಶಗಳು ಆಮದು ಮಾಡಿಕೊಳ್ಳಬೇಡಿ ಎಂದು ಇತರ ದೇಶಗಳಿಗೆ ಸಲಹೆ ನೀಡುವುದು ಸರಿಯಲ್ಲ ಎಂದು ಭಾರತ ಸರಕಾರದ ಮೂಲಗಳು ಗುರುವಾರ ಸ್ಪಷ್ಟಪಡಿಸಿವೆ.

ಇದಕ್ಕೆ ಪ್ರತಿಕ್ರಿಯಿಸಿದ್ದ ಅಮೆರಿಕ, ರಶ್ಯದಿಂದ ಡಿಸ್ಕೌಂಟ್ ದರದಲ್ಲಿ ಲಭಿಸುವ ತೈಲವನ್ನು ಆಮದಯ ಮಾಡಿಕೊಂಡರೆ ಅದು ನಿರ್ಬಂಧದ ಉಲ್ಲಂಘನೆಯಾಗದು, ಆದರೆ ಉಕ್ರೇನ್ ಮೇಲಿನ ರಷ್ಯಾದ ದಾಳಿಯನ್ನು ಸಮರ್ಥಿಸಿದಂತೆ ಆಗುತ್ತದೆ ಎಂದು ಹೇಳಿತ್ತು. ರಷ್ಯಾ ಡಿಸ್ಕೌಂಟ್ ರೂಪದಲ್ಲಿ ಒದಗಿಸುವ ತೈಲವನ್ನು ಭಾರತ ಖರೀದಿಸುವುದು ಅಮೆರಿಕದ ನಿರ್ಬಂಧದ ಉಲ್ಲಂಘನೆಯಾಗುವುದಿಲ್ಲ . ಆದರೆ, ಒಂದು ವೇಳೆ ಇತಿಹಾಸದ ಪುಸ್ತಕವನ್ನು ಈ ಸಂದರ್ಭದಲ್ಲಿ ಬರೆಯಬೇಕಾಗಿ ಬಂದರೆ ನಿಮ್ಮ ಸ್ಥಾನ ಎಲ್ಲಿರುತ್ತದೆ ಎಂಬ ಬಗ್ಗೆ ಒಮ್ಮೆ ಯೋಚಿಸಿ. ರಷ್ಯಾ ನಾಯಕತ್ವಕ್ಕೆ ಬೆಂಬಲ ಎಂಬುದು ಆಕ್ರಮಣಕ್ಕೆ ಬೆಂಬಲವಾಗಿದೆ ಮತ್ತು ಖಂಡಿತಾ ವಿನಾಶಕಾರಿ ಪರಿಣಾಮ ಹೊಂದಿರಲಿದೆ ಎಂದು ಎಂದು ಅಮೆರಿಕದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಭಾರತಕ್ಕೆ ಪರೋಕ್ಷ ಎಚ್ಚರಿಕೆಯನ್ನೂ ರವಾನಿಸಿದ್ದರು.

ರಷ್ಯಾ ತೈಲ ಸಂಸ್ಥೆಯೊಂದಿಗೆ ಇದೀಗ ಇಂಡಿಯನ್ ಆಯಿಲ್ ಸಂಸ್ಥೆ ಸಹಿ ಹಾಕಿರುವ ಒಪ್ಪಂದವು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತಕ್ಕೆ ಲಭ್ಯವಿರುವ ಅತ್ಯುತ್ತಮ ನಿಯಮ ಮತ್ತು ಷರತ್ತುಗಳನ್ನು ಹೊಂದಿದೆ. ಭಾರತದ ತೈಲ ಸಂಸ್ಥೆಗಳು ರಶ್ಯದ ಸಂಸ್ಥೆಗಳಿಂದ ಕಚ್ಛಾತೈಲ ಖರೀದಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಮೂಲಗಳು ಹೇಳಿವೆ.

 ಅಮೆರಿಕ ಹಾಗೂ ಇತರ ಪಾಶ್ಚಿಮಾತ್ಯ ದೇಶಗಳು ರಷ್ಯಾದ ವಿರುದ್ಧ ನಿರ್ಬಂಧ ಜಾರಿಗೊಳಿಸಿರುವಂತೆಯೇ, ಡಿಸ್ಕೌಂಟ್ ದರದಲ್ಲಿ ತೈಲ ಹಾಗೂ ಇತರ ವಸ್ತುಗಳನ್ನು ಒದಗಿಸುವ ಕೊಡುಗೆಯನ್ನು ರಷ್ಯಾವು ಭಾರತ ಹಾಗೂ ಇತರ ಬೃಹತ್ ಆಮದುದಾರ ದೇಶಗಳ ಮುಂದಿರಿಸಿದೆ.


SHARE THIS

Author:

0 التعليقات: