ಶಾದಿ ಮಹಲ್ ಯೋಜನೆ ಕೈಬಿಡಲಾಗಿದೆ: ಮುಖ್ಯಮಂತ್ರಿ ಬೊಮ್ಮಾಯಿ
ಬೆಂಗಳೂರು: ಮುಸ್ಲಿಮ್ ಸಮುದಾಯದ ವಿವಾಹ ಕಾರ್ಯಗಳಿಗೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮೀಸಲಿಡುವ ಶಾದಿ ಮಹಲ್ ಯೋಜನೆ ಕೈಬಿಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಗುರುವಾರ ವಿಧಾನ ಪರಿಷತ್ತಿನ ಕಲಾಪದಲ್ಲಿ ಸಿ.ಎಂ.ಇಬ್ರಾಹಿಂ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಪಸಂಖ್ಯಾತರ ಅಭಿವೃದ್ಧಿಗೆ ನಮ್ಮ ಸರಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ. ಸದ್ಯ ಶಾದಿ ಮಹಲ್ ಯೋಜನೆ ಬಿಟ್ಟು ಇತರೆ ಯಾವುದೇ ಯೋಜನೆ ನಾವು ನಿಲ್ಲಿಸುವುದಿಲ್ಲ ಎಂದು ತಿಳಿಸಿದರು.
ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ಸಿ.ಎಂ.ಇಬ್ರಾಹೀಂ, ಅಲ್ಪಸಂಖ್ಯಾತರಿಗೆ ಮೀಸಲಿಟ್ಟಿದ್ದ 77 ಯೋಜನೆಗಳಲ್ಲಿ ಈಗ 29 ಯೋಜನೆ ಮಾತ್ರ ಉಳಿದಿವೆ. ಅನೇಕ ಯೋಜನೆಗಳನ್ನು ಸರಕಾರ ರದ್ದುಗೊಳಿಸಿದೆ. ಅದರಲ್ಲೂ ಗಂಗಾ ಕಲ್ಯಾಣ ಯೋಜನೆ ರದ್ದು ಮಾಡಲಾಗಿದೆ. ಪಿಎಚ್ಡಿ ವಿದ್ಯಾರ್ಥಿಗಳಿಗೆ ಸಹಾಯ ಧನ 25 ಸಾವಿರ ನೀಡುತ್ತಿದ್ದರು ಎಂದು ಅಸಮಾಧಾನ ವ್ಯಕ್ತಪಡಿದರು.
ಅಷ್ಟೇ ಅಲ್ಲದೆ, ಹಣ್ಣು ವ್ಯಾಪಾರಿಗಳಿಗೆ ನೀಡಲಾಗುವ ಸಣ್ಣ ಪ್ರಮಾಣದ ಸಾಲ ಯೋಜನೆ ನಿಲ್ಲಿಸಲಾಗಿದೆ. ಬಹುತೇಕರು ಆರ್ಥಿಕ ಸಂಕಷ್ಟದಲ್ಲಿ ಇದ್ದಾರೆ. ಇಂತಹ ಸಂದರ್ಭದಲ್ಲಿ ಯೋಜನೆಗಳನ್ನು ಸರಕಾರ ಮುಂದುವರಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಬಸವರಾಜ ಬೊಮ್ಮಾಯಿ, ಗಂಗಾ ಕಲ್ಯಾಣ ಯೋಜನೆ ನಿಲ್ಲಿಸಿಲ್ಲ. ಪಿಎಚ್ಡಿ ವಿದ್ಯಾರ್ಥಿಗಳಿಗೆ ಅನುದಾನ ಮುಂದುವರಿಸುತ್ತೇವೆ. ಅರಿವು ಯೋಜನೆಗೆ ಹೆಚ್ಚು ಅನುದಾನ ನೀಡಿದ್ದೇವೆ. ಜಿಲ್ಲೆಗೊಂದು ಅಬ್ದುಲ್ ಕಲಾಂ ಶಾಲೆ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.
50 ಸಾವಿರ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲು 110 ಕೋಟಿ ರೂ. ಹಣ ಇಟ್ಟಿದ್ದೇನೆ. ಅಲ್ಪಸಂಖ್ಯಾತರ ವಸತಿ ಗೃಹಗಳಲ್ಲಿ ವಿದ್ಯಾರ್ಥಿಗಳ ಸೇರ್ಪಡೆ ಹೆಚ್ಚಳ ಮಾಡಲಾಗಿದೆ. ಕಾಲನಿ ಅಭಿವೃದ್ಧಿಯನ್ನು ಸ್ಲಂ ಬೋರ್ಡ್ ಮೂಲಕ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಅಲ್ಪಸಂಖ್ಯಾತ ಅಭಿವೃದ್ಧಿಗೆ ಸರಕಾರ ಅನೇಕ ಕಾರ್ಯಕ್ರಮ ಜಾರಿ ಮಾಡಿದೆ ಎಂದು ಮಾಹಿತಿ ನೀಡಿದರು.
0 التعليقات: