ಆಸ್ಕರ್ಸ್ ವೇದಿಕೆಯಲ್ಲಿಯೇ ಕ್ರಿಸ್ ರಾಕ್ ಕೆನ್ನೆಗೆ ಬಾರಿಸಿದ ವಿಲ್ ಸ್ಮಿತ್
ಹೊಸದಿಲ್ಲಿ: ಲಾಸ್ ಏಂಜಲಿಸ್ನ ಡಾಲ್ಬಿ ಥಿಯೇಟರಿನಲ್ಲಿ ನಡೆದ 94ನೇ ಅಕಾಡೆಮಿ ಅವಾಡ್ರ್ಸ್ ಸಮಾರಂಭದಲ್ಲಿ ಅತ್ಯುತ್ತಮ ನಟ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಖ್ಯಾತ ನಟ ವಿಲ್ ಸ್ಮಿತ್ ಅವರು ಕಾರ್ಯಕ್ರಮದ ನಿರೂಪಕ ಕ್ರಿಸ್ ರಾಕ್ ಅವರ ಕೆನ್ನೆಗೆ ಬಾರಿಸಿ ಅವರನ್ನು ನಿಂದಿಸಿದ ಘಟನೆ ನಡೆದಿದೆ. ತಮ್ಮ ಪತ್ನಿ ಜಡಾ ಪಿಂಕೆಟ್ ಬಗ್ಗೆ ಕ್ರಿಸ್ ರಾಕ್ ಹಾರಿಸಿದ ಹಾಸ್ಯ ಚಟಾಕಿಯೊಂದು ವಿಲ್ ಸ್ಮಿತ್ ಅವರ ಕೋಪಕ್ಕೆ ಕಾರಣವಾಯಿತು ಎಂದು ವರದಿಯಾಗಿದೆ.
ಆದರೆ ಈ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ವಿಲ್ ಸ್ಮಿತ್ ಕಣ್ಣೀರು ಸುರಿಸಿ ತಮ್ಮ ವರ್ತನೆಗೆ ಕ್ಷಮೆ ಯಾಚಿಸಿದರಾದೂ ಕ್ರಿಸ್ ರಾಕ್ ಅವರ ಬಳಿ ಕ್ಷಮೆ ಕೋರಲಿಲ್ಲ.
"ನಾನು ಅಕಾಡೆಮಿಗೆ ಕ್ಷಮೆ ಕೋರುತ್ತಿದ್ದೇನೆ. ನನ್ನೊಂದಿಗೆ ಪ್ರಶಸ್ತಿ ಪಡೆದ ಎಲ್ಲರಿಂದಲೂ ಕ್ಷಮೆಕೋರುತ್ತೇನೆ. ಇದೊಂದು ಸುಂದರ ಕ್ಷಣ ಆದರೆ ನಾನು ಪ್ರಶಸ್ತಿ ದೊರಕಿದೆ ಎಂಬ ಕಾರಣಕ್ಕೆ ಅಳುತ್ತಿಲ್ಲ,'' ಎಂದರು.
ವಿಲ್ ಸ್ಮಿತ್ ಅವರ ಪತ್ನಿ ಜಡಾ ಪಿಂಕೆಟ್ ಅವರ ಬೋಳು ತಲೆಯನ್ನು ಉಲ್ಲೇಖಿಸಿ ಕ್ರಿಸ್ ರಾಕ್ ಅವರು ಜಿಐ ಜೇನ್ ಹಾಸ್ಯ ಮಾಡಿದ್ದೇ ಈ ಘಟನೆಗೆ ಕಾರಣವೆನ್ನಲಾಗಿದೆ. ಜಡಾ ಪಿಂಕೆಟ್ ಅವರು ಅಲೋಪೇಶಿಯಾದಿಂದ ಬಳಲುತ್ತಿದ್ದಾರೆ. ಕ್ರಿಸ್ ರಾಕ್ ಅವರ ಮಾತುಗಳನ್ನು ಕೇಳುತ್ತಿದ್ದಂತೆ ಜಡಾ ಆಘಾತಗೊಂಡರು. ಆಗ ವಿಲ್ ಸ್ಮಿತ್ ಅವರು ವೇದಿಕೆಯೇರಿ ಕ್ರಿಸ್ ಅವರ ಕಪಾಳಕ್ಕೆ ಬಾರಿಸಿ ನಂತರ ತಮ್ಮ ಸ್ಥಾನಕ್ಕೆ ಹಿಂತಿರುಗಿ "ನನ್ನ ಪತ್ನಿಯನ್ನು ನಿನ್ನ ಕೆಟ್ಟ ಬಾಯಿಯಿಂದ ಹೊರಗಿಡು,'' ಎಂದು ಹೇಳಿದರು.
ಇದು ನಿಜವಾಗಿಯೂ ನಡೆದ ಒಂದು ಜಗಳವೇ ಅಥವಾ ಪೂರ್ವಯೋಜಿತ ನಾಟಕವೇ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾದರೂ ಅಂತಿಮವಾಗಿ ಇವುಗಳು ನಾಟಕವಲ್ಲ ಎಂದು ತಿಳಿದು ಬಂತು.
0 التعليقات: