Thursday, 17 March 2022

ರಷ್ಯಾದಿಂದ ಕಚ್ಚಾ ತೈಲ ಖರೀದಿ ಬಗ್ಗೆ ಭಾರತ ಚಿಂತನೆ ?

ರಷ್ಯಾದಿಂದ ಕಚ್ಚಾ ತೈಲ ಖರೀದಿ ಬಗ್ಗೆ ಭಾರತ ಚಿಂತನೆ ?

ಹೊಸದಿಲ್ಲಿ: ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಖರೀದಿ ನಡೆಸುವ ಬಗ್ಗೆ ಭಾರತ ಗಂಭೀರ ಚಿಂತನೆ ನಡೆಸಿದೆ. ಹಲವು ಯೂರೋಪಿಯನ್ ದೇಶಗಳು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವುದನ್ನು ಉಲ್ಲೇಖಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರೀಂದಮ್ ಬಗ್ಚಿ, ಭಾರತ ಕೂಡಾ ರಷ್ಯಾದಿಂದ ತೈಲ ಖರೀದಿಸುವ ಸಾಧ್ಯತೆಯನ್ನು ತಳ್ಳಿಹಾಕಿಲ್ಲ.

ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿರುವುದನ್ನು ಖಂಡಿಸಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ವಿಧಿಸಿರುವ ಆರ್ಥಿಕ ದಿಗ್ಬಂಧನದಿಂದಾಗಿ ರಷ್ಯಾ ಆರ್ಥಿಕತೆ ಮೇಲೆ ತೀವ್ರ ಪರಿಣಾಮ ಉಂಟಾಗಿದೆ. ಇಂಥ ಸನ್ನಿವೇಶದಲ್ಲಿ ಭಾರತಕ್ಕೆ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಮತ್ತು ಇತರ ಸರಕುಗಳನ್ನು ನೀಡಲು ರಷ್ಯಾ ಮುಂದೆ ಬಂದಿದೆ. ಪುಟಿನ್ ಅವರನ್ನು ಏಕಾಂಗಿಯಾಗಿ ಮಾಡುವ ಬಯಕೆ ಅಮೆರಿಕದ್ದು. ಆದಾಗ್ಯೂ ಭಾರತ ಮಿಲಿಟರಿ ಹಾರ್ಡ್‍ವೇರ್‍ಗಳಿಗೆ ರಷ್ಯಾವನ್ನು ಅವಲಂಬಿಸುವುದು ಅನಿವಾರ್ಯ ಎಂದು ಅಮೆರಿಕ ಒಪ್ಪಿಕೊಂಡಿದೆ. ಆದರೆ ಭಾರತ, ರಷ್ಯಾದಿಂದ ಅಂತರ ಕಾಪಾಡಿಕೊಳ್ಳುವಂತೆ ಸಲಹೆ ಮಾಡಿದೆ.

ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಖರೀದಿಸುವ ಸಾಧ್ಯತೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಗ್ಚಿ, "ಭಾರತ ತನ್ನ ತೈಲ ಅಗತ್ಯತೆಯ ಬಹುಭಾಗವನ್ನು ಆಮದು ಮಾಡಿಕೊಳ್ಳುತ್ತಿದೆ... ಆದ್ದರಿಂದ ಜಾಗತಿಕ ಇಂಧನ ಮಾರುಕಟ್ಟೆಯ ಎಲ್ಲ ಸಾಧ್ಯತೆಗಳನ್ನೂ ಭಾರತ ಪರಿಶೀಲಿಸುತ್ತಿದೆ" ಎಂದು ಸ್ಪಷ್ಟಪಡಿಸಿದರು.

ರಷ್ಯಾ ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ತೈಲ ಪೂರೈಸುವ ದೇಶವಲ್ಲ. ಆದರೆ ಹಲವು ದೇಶಗಳು, ಅದರಲ್ಲೂ ಮುಖ್ಯವಾಗಿ ಯೂರೋಪಿಯನ್ ರಾಷ್ಟ್ರಗಳು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿವೆ ಎನ್ನುವುದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ಈ ವಿಷಯವನ್ನು ಅಷ್ಟಕ್ಕೆ ಬಿಡುತ್ತೇನೆ" ಎಂದು ನುಡಿದರು.


 



SHARE THIS

Author:

0 التعليقات: