Saturday, 26 March 2022

ಸರಕಾರದ ಜತೆ ಸಂಘರ್ಷಕ್ಕೆ ಇಳಿಯಬೇಡಿ: ಸಂಧಾನದ ಮೂಲಕ ಪರಿಹಾರದ ಭರವಸೆಯಿದೆ -ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್

 

ಸರಕಾರದ ಜತೆ ಸಂಘರ್ಷಕ್ಕೆ ಇಳಿಯಬೇಡಿ: ಸಂಧಾನದ ಮೂಲಕ ಪರಿಹಾರದ ಭರವಸೆಯಿದೆ 

-ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ 

ಮುಸ್ಲಿಂ ಹೆಣ್ಮಕ್ಕಳಿಗೆ ಶಾಲಾ ಕಾಲೇಜು ತರಗತಿ ಕೊಠಡಿಗಳಲ್ಲಿ ಹಿಜಾಬ್ ನಿರ್ಬಂಧಿಸಿ ಕರ್ನಾಟಕ ಹೈ ಕೋರ್ಟ್‌ನಿಂದ ತೀರ್ಪು ಬಂದಿರುವ ಹಿನ್ನೆಲೆಯಲ್ಲಿ ಸಮುದಾಯದೊಳಗೆ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದ್ದು,ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗುವ ಹಂತಕ್ಕೆ ಬಂದು ನಿಂತಿದೆ.

ಈ ನಿಟ್ಟಿನಲ್ಲಿ ನಾವು ಸರಕಾರ ಮತ್ತು ನ್ಯಾಯಾಲಯದೊಂದಿಗೆ ಸಂಘರ್ಷಕ್ಕೆ ನಿಲ್ಲುವುದಿಲ್ಲ. ಸರಕಾರ ಮತ್ತು ನ್ಯಾಯಾಲಯದ ಕಡೆಯಿಂದ ಗೊಂದಲಕ್ಕೆ ತೆರೆ ಎಳೆದು ತಕ್ಷಣ ಸಂಧಾನದ ಮೂಲಕ ಸರ್ವರಿಗೂ ಸಮ್ಮತವಾಗುವ ರೀತಿಯ ಕ್ರಮವನ್ನು ನಿರೀಕ್ಷೆ ಮಾಡುವುದಾಗಿ ಗ್ರಾಂಡ್  ಮುಫ್ತಿ ಆಫ್ ಇಂಡಿಯಾ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಪ್ರಸ್ತಾಪಿಸಿದ್ದಾರೆ.

ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನ ಮೊರೆ ಹೋಗಲು ನಾವು ನಿರ್ಧರಿಸಿದ್ದೇವೆ. ಮರ್ಕಝ್  ಲಾ ಕಾಲೇಜಿನ ಪ್ರಗಲ್ಭ ವಕೀಲರ ತಂಡ ಈ ಬಗ್ಗೆ ಕಾರ್ಯ ಪ್ರವೃತ್ತವಾಗಿದೆ. ಹಿಜಾಬ್ ವಿಚಾರವನ್ನು ಕಾನೂನಿನ ಮೂಲಕ ಎದುರಿಸಲು ಅವಕಾಶ ಮುಕ್ತವಾಗಿದೆ. ಆ ಬಗ್ಗೆ ಸಂವಿಧಾನ ನೀಡಿದ ಅವಕಾಶವನ್ನು ಬಳಸಿ ನಾವು ಮುಂದಡಿ ಇಡುತ್ತೇವೆ. ಆದರೆ ಸರಕಾರ ಮತ್ತು ಕೋರ್ಟ್ ನೊಂದಿಗೆ ಸಂಘರ್ಷಕ್ಕೆ ನಿಲ್ಲುವುದಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು. ಕರ್ನಾಟಕದ ವಿವಿಧ ಕಡೆಗಳಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಮಧ್ಯೆ ಮೂಡುಬಿದಿರೆ ಝಿಕ್ರಾ ಅಕಾಡೆಮಿಯಲ್ಲಿ ಏರ್ಪಡಿಸಿದ  ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು

ಸೋಮವಾರದಿಂದ ಪ್ರಾರಂಭವಾಗುವ ಎಸ್ಸೆಸ್ಸೆಲ್ಲಿ ಪರೀಕ್ಷೆಯಲ್ಲಿ ಹಿಜಾಬ್‌ಗೆ ನಿಷೇಧವಿರುವ ಬಗ್ಗೆ ಗಮನ ಸೆಳೆದಾಗ ಎಸ್ಸೆಸ್ಸೆಲ್ಸಿ ಪರೀಕ್ಷೆಯು ವಿದ್ಯಾರ್ಥಿ ಜೀವನದಲ್ಲಿ ಮಹತ್ತರವಾದ ಒಂದು ಹಂತವಾಗಿದ್ದು ಯಾರೂ ಪರೀಕ್ಷೆಗಳನ್ನು ಕಳೆದುಕೊಳ್ಳಬಾರದು. ಗರಿಷ್ಠ ಅನುಕೂಲತೆಗಳನ್ನು ಬಳಸಿ ಪರೀಕ್ಷೆಗೆ ಹಾಜರಾಗಬೇಕು. ಸುಪ್ರೀಂ ಕೋರ್ಟ್‌ನಲ್ಲಿ ಈ ಪ್ರಕರಣ ಇತ್ಯರ್ಥಗೊಂಡು ಶೀಘ್ರವಾಗಿ ನಮಗೆ ನ್ಯಾಯ ಸಿಗುವ ಭರವಸೆಯಿದೆ. ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿ ಪಡಿಸುವ ಬಲಿಷ್ಠ ಸಂವಿಧಾನ ಹೊಂದಿರುವ ಭಾರತದಲ್ಲಿ ಸಾಮರಸ್ಯ ಮತ್ತು ಸಹಿಷ್ಣುತೆಗೆ ಧಕ್ಕೆಯಾಗದಂತೆ ನಡೆದುಕೊಳ್ಳುವುದು ದೇಶದ ಎಲ್ಲ ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಯಾಗಿದೆಯೆಂದು ಅವರು ಹೇಳಿದರು.

ಸಮಾವೇಶದಲ್ಲಿ ಸಯ್ಯಿದ್ ಸಾದಾತ್ ತಂಙಳ್ ಗುರುವಾಯನಕೆರೆ, ಎಸ್.ವೈ.ಎಸ್.ಕರ್ನಾಟಕ ರಾಜ್ಯಾಧ್ಯಕ್ಷ ಡಾ.ಎಮ್ಮೆಸ್ಸೆಂ. ಝೈನೀ ಕಾಮಿಲ್, ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ನ, ಕೆಕೆಎಂ ಕಾಮಿಲ್ ಸಖಾಫಿ ಕೃಷ್ಣಾಪುರ ಮುಂತಾದವರು ಮಾತನಾಡಿದರು.

ಝಿಕ್ರಾ ಅಕಾಡೆಮಿ ಅಧ್ಯಕ್ಷ ನೌಫಲ್ ಸಖಾಫಿ ಕಳಸ ಸ್ವಾಗತಿಸಿದರು.


SHARE THIS

Author:

0 التعليقات: