Thursday, 17 March 2022

‘ಹಿಜಾಬ್' ಹೈಕೋರ್ಟ್ ಆದೇಶ: ‘ಕರ್ನಾಟಕ ಬಂದ್' ಸದನದಲ್ಲಿ ಪ್ರತಿಧ್ವನಿ

 

‘ಹಿಜಾಬ್' ಹೈಕೋರ್ಟ್ ಆದೇಶ: ‘ಕರ್ನಾಟಕ ಬಂದ್' ಸದನದಲ್ಲಿ ಪ್ರತಿಧ್ವನಿ

ಬೆಂಗಳೂರು: ‘ಹಿಜಾಬ್'(hijab) ಧರಿಸುವ ವಿಚಾರ ಸಂಬಂಧ ಹೈಕೋರ್ಟ್ ಆದೇಶಕ್ಕೆ ಅಸಮಾಧಾನ ವ್ಯಕ್ತಪಡಿಸಿ ಮುಸ್ಲಿಮ್ ಸಂಘಟನೆಗಳ ‘ಕರ್ನಾಟಕ ಬಂದ್'(Karnataka bandh)ಗೆ ಕರೆ ನೀಡಿರುವುದು ವಿಧಾನಸಭೆಯಲ್ಲಿಯೂ ಪ್ರತಿಧ್ವನಿಸಿತು. ‘ತೀರ್ಪಿಗೆ ಗೌರವ ನೀಡದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು' ಎಂಬ ಬಿಜೆಪಿ ಸದಸ್ಯರ ಆಗ್ರಹಕ್ಕೆ, ಕಾಂಗ್ರೆಸ್ ಸದಸ್ಯರು ಆಕ್ಷೇಪಿಸಿದ್ದು ಕೆಲಕಾಲ ಗದ್ದಲಕ್ಕೆ ಕಾರಣವಾಯಿತು.

ಗುರುವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ವಿಚಾರ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ರಘುಪತಿ ಭಟ್, ‘ಹಿಜಾಬ್(ಸ್ಕಾರ್ಫ್) ಧರಿಸುವ ಸಂಬಂಧ ಹೈಕೋರ್ಟ್ ಮಧ್ಯಂತರ ಆದೇಶದ ಸಂದರ್ಭದಲ್ಲಿ ಕೆಲವು ವಿದ್ಯಾರ್ಥಿಗಳು ಗೊಂದಲದಿಂದ ಪರೀಕ್ಷೆಗೆ ಹಾಗೂ ತರಗತಿಗೆ ಹಾಜರಾಗಿಲ್ಲ. ಇದೀಗ ಅಂತಿಮ ಆದೇಶ ಬಂದಿದೆ. ಈ ಹಿಂದೆ ಪರೀಕ್ಷೆಗೆ ಗೈರಾಗಿದ್ದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಗೆ ಅವಕಾಶ ಕಲ್ಪಿಸಬೇಕು' ಎಂದು ಮನವಿ ಮಾಡಿದರು.

‘ವಿದ್ಯಾರ್ಥಿಗಳು ಹಾಗೂ ಮುಖಂಡರ ಮನವಿಯಂತೆ ಹಿಜಾಬ್ ತೆಗೆದಿಟ್ಟು ಪರೀಕ್ಷೆ ಬರೆಯಲು ಮುಂದಾಗುವ ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು. ಜೊತೆಗೆ, ಹೈಕೋರ್ಟ್ ಅಂತಿಮ ಆದೇಶದ ಬಳಿಕವೂ ಪ್ರತಿಭಟನೆ ನಡೆಸಿ ಕಾಲೇಜಿನ ವಾತಾವರಣ ಕಲುಷಿತಗೊಳಿಸುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು' ಎಂದು ರಘುಪತಿ ಆಗ್ರಹಿಸಿದರು.

ಈ ವೇಳೆ ಮಧ್ಯೆಪ್ರವೇಶಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ‘ಹೈಕೋರ್ಟ್ ಆದೇಶವನ್ನು ವಿರೋಧಿಸಿ ಬಂದ್ ಕರೆ ನೀಡಿದ್ದು, ನ್ಯಾಯಾಲಯದ ಆದೇಶಕ್ಕೆ ಯಾವುದೇ ಕಿಮ್ಮತ್ತು ಇಲ್ಲವೇ? ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಅದನ್ನು ಬಿಟ್ಟು ಹೀಗೆ ಅರಾಜಕತೆ ಸೃಷ್ಟಿ ಮಾಡುವವರಿಗೆ ಯಾರೂ ಬೆಂಬಲ ನೀಡಬಾರದು. ಇವರು ವಿರುದ್ಧ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು' ಎಂದು ಸಲಹೆ ನೀಡಿದರು.

ಬಳಿಕ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ‘ಹೈಕೋರ್ಟ್ ಆದೇಶವನ್ನು ಎಲ್ಲರೂ ಪಾಲಿಸಬೇಕು. ಆದರೆ, ಮೇಲ್ಮನವಿ ಸಲ್ಲಿಸಲು ಈಗಾಗಲೇ ಸಂಬಂಧಪಟ್ಟವರು ತೀರ್ಮಾನ ಮಾಡಿದ್ದಾರೆ. ಆದರೆ, ತೀರ್ಪಿನ ವಿರುದ್ಧ ತಮಗೆ ಅಸಮಾಧಾನವಿದೆ ಎಂದು ಶಾಂತಿಯುತ ಪ್ರತಿಭಟನೆ ಮಾಡುವವರನ್ನು ತಡೆಯಲು ಸಾಧ್ಯವಿಲ್ಲ. ಅದು ಅವರ ಹಕ್ಕು' ಎಂದು ಪ್ರತಿಪಾದಿಸಿದರು.

ಇದಕ್ಕೆ ಧ್ವನಿಗೂಡಿಸಿದ ವಿಪಕ್ಷ ಉಪ ನಾಯಕ ಯು.ಟಿ.ಖಾದರ್, ‘ಹೈಕೋರ್ಟ್ ಮಧ್ಯಂತರ ಆದೇಶ ಹಾಗೂ ಈ ಸಂಬಂಧ ಉಂಟಾದ ಗೊಂದಲದ ಹಿನ್ನೆಲೆಯಲ್ಲಿ ಪರೀಕ್ಷೆಗೆ ಗೈರು ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು. ಕೆಲ ಧಾರ್ಮಿಕ ಮುಖಂಡರು ಬಂದ್ ಗೆ ಕರೆ ಕೊಟ್ಟಿರೋದು ಅಗೌರವ ಅಲ್ಲ, ಅವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ, ಅಷ್ಟೇ' ಎಂದು ಸ್ಪಷ್ಟನೆ ನೀಡಿದರು.

ಬಿಜೆಪಿಯ ಸಿ.ಟಿ.ರವಿ ಮಾತನಾಡಿ, ‘ನ್ಯಾಯಾಲಯ ಸುದೀರ್ಘವಾಗಿ ಎರಡೂ ಕಡೆಯವರ ವಾದವನ್ನು ಆಲಿಸಿ ತೀರ್ಪು ನೀಡಿದೆ. ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಆದರೆ, ಬೆದರಿಕೆ ಹಾಕುವ ರೀತಿಯಲ್ಲಿ ಶಾಂತಿಯುತ ವಾತಾವರಣ ಕಲುಷಿತಗೊಳಿಸಲು ಅವಕಾಶವಿದೆಯೇ? ಈ ವಿಚಾರದಲ್ಲಿ ಓಟ್‍ಬ್ಯಾಂಕ್ ರಾಜಕಾರಣ ಮಾಡುವುದು ಪಾಪದ ಕೆಲಸ' ಎಂದು ಆಕ್ಷೇಪಿಸಿದರು.

ಬಳಿಕ ಉತ್ತರ ನೀಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ‘ನ್ಯಾಯಾಲಯದ ಆದೇಶ ಪಾಲನೆ ಮಾಡುವುದು ಸರಕಾರದ ಕರ್ತವ್ಯ. ಸುಪ್ರೀಂ ಕೋರ್ಟ್‍ನಲ್ಲಿ ಹೈಕೋರ್ಟ್ ಆದೇಶದ ಬಗ್ಗೆ ತಡೆಯಾಜ್ಞೆ ಬರುವವರೆಗೆ ಜಾರಿಯಲ್ಲಿರುವ ಆದೇಶವನ್ನು ಜಾರಿಗೊಳಿಸುವುದು ಸರಕಾರದ ಜವಾಬ್ದಾರಿ. ಕೋರ್ಟ್ ಆದೇಶಕ್ಕೆ ಮೊದಲು ಮಕ್ಕಳು ಪರೀಕ್ಷೆಗೆ ಗೈರಾಗಿದ್ದರೆ ಅವರಿಗೆ ಮತ್ತೊಮ್ಮೆ ಪರೀಕ್ಷೆಗೆ ಅವಕಾಶ ಕೊಡುವ ಬಗ್ಗೆ ಪರಿಗಣಿಸಬಹುದಿತ್ತು.

ಆದರೆ, ‘ಹಿಜಾಬ್' ವಿಚಾರವಾಗಿ ಹೈಕೋರ್ಟ್ ಮಧ್ಯಂತರ ಆದೇಶದ ನಂತರವೂ ಕೆಲ ವಿದ್ಯಾರ್ಥಿಗಳು ಪರೀಕ್ಷೆ ತಪ್ಪಿಸಿಕೊಂಡಿದ್ದರೆ ಅಂತವರಿಗೆ ಮತ್ತೊಮ್ಮೆ ಅವಕಾಶ ಕೊಡಬೇಕೋ, ಬೇಡವೋ ಎಂದು ಆಲೋಚನೆ ಮಾಡಬೇಕಿದೆ. ಅಲ್ಲದೆ, ಮತ್ತೊಮ್ಮೆ ಪರೀಕ್ಷೆಗೆ ಅವಕಾಶ ಕೊಡುವ ಬಗ್ಗೆ ನ್ಯಾಯಾಲಯ ಯಾವುದೇ ಸೂಚನೆ ನೀಡಿಲ್ಲ. ಇದು ಸರಕಾರದ ನಿರ್ಧಾರಕ್ಕೆ ಬಿಟ್ಟಿದ್ದು. ಆದರೆ, ಹೈಕೋರ್ಟ್ ಆದೇಶದ ಬಳಿಕವೂ ಪರೀಕ್ಷೆಗೆ ಗೈರು ಹಾಜರಾದ ವಿದ್ಯಾರ್ಥಿಗಳ ವಿಚಾರ ನಾವು ಇದನ್ನೇ ಬೆಳೆಸಿಕೊಂಡು ಹೋದರೆ ಮುಂದೆ ಬರುವ ಎಲ್ಲರಿಗೂ ಪರೀಕ್ಷೆಗಳನ್ನು ಮಾಡುವ ಸ್ಥಿತಿಯಲ್ಲಿ ಸರಕಾರ ಇರುವುದಿಲ್ಲ. ಯಾರು ಯಾರು ಯಾವಾಗ ಬೇಕಾದಾಗಲೆಲ್ಲಾ ಪರೀಕ್ಷೆ ಬರೆಯಲು ಅವಕಾಶ ಕೇಳಿದರೆ ಅದಕ್ಕೆ ಅವಕಾಶ ಕೊಡಲು ಸಾಧ್ಯವಿಲ್ಲ. ಹೈಕೋರ್ಟ್ ಮಧ್ಯಂತರ ಆದೇಶದ ಮೊದಲು ಅನ್ಯಾಯ ಆಗಿದ್ದರೆ ಅದು ಸರಿಪಡಿಸಲು ಸರಕಾರ ಕ್ರಮ ಕೈಗೊಳ್ಳಲಿದೆ' ಎಂದು ಭರವಸೆ ನೀಡಿದರು.


SHARE THIS

Author:

0 التعليقات: