Friday, 18 March 2022

'ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ವಿರುದ್ಧ ಮಾತನಾಡಿ': ಭಾರತವನ್ನು ಆಗ್ರಹಿಸಿದ ಅಮೆರಿಕಾ ಸಂಸದರು


 'ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ವಿರುದ್ಧ ಮಾತನಾಡಿ': ಭಾರತವನ್ನು ಆಗ್ರಹಿಸಿದ ಅಮೆರಿಕಾ ಸಂಸದರು

ಹೊಸದಿಲ್ಲಿ: ಉಕ್ರೇನ್ ಮೇಲಿನ ರಷ್ಯಾ ಆಕ್ರಮಣದ ವಿರುದ್ಧ ಮಾತನಾಡುವಂತೆ ಅಮೆರಿಕಾದ ಕಾಂಗ್ರೆಸ್ ಸದಸ್ಯರ ಗುಂಪೊಂದು ಭಾರತ ಸರಕಾರವನ್ನು ಆಗ್ರಹಿಸಿದೆ.

ಅಮೆರಿಕಾದ ಕಾಂಗ್ರೆಸ್ ಸದಸ್ಯರಾದ ಜೋ ವಿಲ್ಸನ್ ಮತ್ತು ಭಾರತೀಯ ಮೂಲದ ರೋ ಖನ್ನಾ ಅವರು ಅಮೆರಿಕಾದಲ್ಲಿನ ಭಾರತೀಯ ರಾಯಭಾರಿ ತರಣ್‍ಜಿತ್ ಸಿಂಗ್ ಸಂಧು ಜತೆ  ಈ ಕುರಿತು ಚರ್ಚೆ ನಡೆಸಿದ್ದಾರೆ.

ಉಕ್ರೇನ್‍ನಲ್ಲಿ ರಷ್ಯಾದ ಮಿಲಿಟರಿ ನಾಗರಿಕರನ್ನು ಗುರಿ ಮಾಡುತ್ತಿರುವುದನ್ನೂ ಭಾರತ ಖಂಡಿಸಬೇಕು. ಭಾರತ ತನ್ನ ಪ್ರಭಾವ ಬಳಸಿ ಶಾಂತಿಗಾಗಿ ಕರೆ ನೀಡಬೇಕು ಎಂದು ಭಾರತ ಸರಕಾರವನ್ನು ಖನ್ನಾ ಆಗ್ರಹಿಸಿದ್ದಾರೆ.

ಇದಕ್ಕೂ ಮುನ್ನ ಅಮೆರಿಕಾದ ಏಳು ಕಾಂಗ್ರೆಸ್ ಸದಸ್ಯರು ಕೂಡ ಸಂಧು ಅವರಿಗೆ ಪತ್ರ ಬರೆದು, ತಮಗೆ ಭಾರತ ಮತ್ತು ರಷ್ಯಾ ನಡುವಿನ ಸಂಬಂಧದ ಬಗ್ಗೆ ತಿಳಿದಿದ್ದರೂ ಮಾರ್ಚ್ 2ರಂದು ನಡೆದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಮತದಾನದ ವೇಳೆ ಭಾರತ ಸರಕಾರ ಗೈರಾಗಿದ್ದು ನಿರಾಸೆಯಾಗಿದೆ, ಭಾರತ ಇಕ್ಕಟ್ಟಿನ ಸ್ಥಿತಿಯಲ್ಲಿದೆ ಎಂದು ಅರ್ಥವಾಗುತ್ತಿದೆ ಆದರೆ ರಷ್ಯಾದ ಕ್ರಮಗಳಿಗೆ 21ನೇ ಶತಮಾನದಲ್ಲಿ ಸ್ಥಳವಿಲ್ಲ ಎಂದು ಅವರು ಹೇಳಿದ್ದಾರೆ.

ಅಮೆರಿಕಾದ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ಉಪಸಮಿತಿಯ ಅಧ್ಯಕ್ಷ ಅನಿಲ್ ಬೇರಾ ಕೂಡ ಇತ್ತೀಚೆಗೆ ಪ್ರತಿಕ್ರಿಯಿಸಿ, ಭಾರತ ತನ್ನ ಗಡಿಯನ್ನು ಬಾಹ್ಯ ಆಕ್ರಮಣದಿಂದ ರಕ್ಷಿಸುವ ದೀರ್ಘ ಇತಿಹಾಸ ಹೊಂದಿರುವ ಹೊರತಾಗಿಯೂ ಪುಟಿನ್ ಅವರು ಅಪ್ರಚೋದಿತವಾಗಿ ಸ್ವತಂತ್ರ ದೇಶವೊಂದರ ಮೇಲೆ ಆಕ್ರಮಣ ನಡೆಸಿರುವುದರ ಬಗ್ಗೆ ಭಾರತ ಮೌನವಾಗಿದೆ,'' ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.


SHARE THIS

Author:

0 التعليقات: