Saturday, 5 March 2022

ರಿವರ್ಸ್ ಗೇರ್ ಬಜೆಟ್: ವಿಪಕ್ಷ ಉಪನಾಯಕ ಯು.ಟಿ.ಖಾದರ್ ಟೀಕೆ


 ರಿವರ್ಸ್ ಗೇರ್ ಬಜೆಟ್: ವಿಪಕ್ಷ ಉಪನಾಯಕ ಯು.ಟಿ.ಖಾದರ್ ಟೀಕೆ

ಮಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಮಂಡಿಸಿದ ಬಜೆಟ್ ರಾಜ್ಯದ ಅಭಿವೃದ್ಧಿ ಯನ್ನು ಹಿಂದಕ್ಕೆ ಕೊಂಡೊಯ್ಯುವ 'ರಿವರ್ಸ್ ಗೇರ್ ಬಜೆಟ್' ಎಂದು ವಿಧಾನ ಸಭೆಯ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಟೀಕಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಇದು ಸರ್ವ ಸ್ಪರ್ಶಿ ಬಜೆಟ್ ಅಂತಾರೆ. ಆದರೆ ವಾಸ್ತವದಲ್ಲಿ ಇದು ಹಿಟ್ ಆ್ಯಂಡ್ ರನ್ ಬಜೆಟ್. ಸರ್ಕಾರದ ಬಂಡವಾಳವೇ ಸಾಲ ಮತ್ತು ಸಾರಾಯಿ ಮೇಲೆ ಅವಲಂಬಿತವಾಗಿದೆ. ಸರಕಾರ 72 ಸಾವಿರ ಕೊಟಿ ರೂಪಾಯಿ ಸಾಲ ಮಾಡುವುದಾದರೆ ಸರಿಸುಮಾರು 29 ಸಾವಿರ ಕೋಟಿ ರೂಪಾಯಿಗಳನ್ನ ಅಬಕಾರಿ ಮೂಲಕ ಸಂಗ್ರಹಿಸಲು ಹೊರಟಿದೆ. ಒಟ್ಟು 2.65 ಲಕ್ಷ ಕೋಟಿ ರೂ. ಬಜೆಟ್ ನಲ್ಲಿ, 1.01 ಲಕ್ಷ ಕೋಟಿ ರೂ. ಸಾಲ ಮತ್ತು ಸಾರಾಯಿಯಿಂದಲೇ ಬರುತ್ತಿದೆ. ಕೊರತೆ ಬಜೆಟ್ ನಲ್ಲಿ ಸರಕಾರ ನಡೆಯುತ್ತದೆಯೆಂದರೆ ಬಂಡವಾಳ ಹಾಕಲು ಯಾರೂ ಮುಂದೆ ಬರುವುದಿಲ್ಲ. ಈ ಮೂಲಕ  ಸರ್ಕಾರ ಜನರನ್ನ ಇನ್ನಷ್ಟು ಹಿಂದಕ್ಕೆ ಕೊಂಡೊಯ್ಯುತ್ತಿದೆ ಎಂದು ಹೇಳಿದರು.

ಸಿಎಂ ಬೊಮ್ಮಾಯಿ ನೀರಾವರಿ ತಜ್ಞರು ಕೂಡ ಹೌದು. ಸರ್ಕಾರ 26 ಸಾವಿರ ಕೋಟಿ ರೂಪಾಯಿಗಳನ್ನ ನೀರಾವರಿ ಗೆ ಮೀಸಲಿಟ್ಟಿದೆ. ಆದರೆ ನೀರಾವರಿ ಇಲಾಖೆ ಸುಮಾರು 17 ಸಾವಿರ ಕೋಟಿ ರೂ. ಬಾಕಿ ಬಿಲ್ ಇನ್ನೂ ಪಾವತಿ ಆಗಿಲ್ಲ. ಹೀಗಿರುವಾಗ ಸರ್ಕಾರ ಕೇವಲ 9 ಸಾವಿರ ಕೋಟಿ ರೂಪಾಯಿಗಳಲ್ಲಿ ಅಭಿವೃದ್ಧಿ ಮಾಡಲು ಸಾಧ್ಯವೇ ಎಂದು ಖಾದರ್‍ ಪ್ರಶ್ನಿಸಿದರು.

ಕೃಷ್ಣ ಮೇಲ್ದಂಡೆಗೆ ಸರ್ಕಾರದಿಂದ 5 ಸಾವಿರ ಕೋಟಿ ರೂ. ಮೀಸಲಿಟ್ಟಿರುವುದು ಶ್ಲಾಘನೀಯ. ಆದರೆ ಈ ಹಿಂದೆ ಆಗಿರುವ ಕೆಲಸ ಬಗ್ಗೆ ಮಾಹಿತಿ ನೀಡಲಿ, ಇನ್ನೂ ಮೇಕೆದಾಟು ಹಾಗೂ ಮಹದಾಯಿಗೆ ಸರ್ಕಾರ 1 ಸಾವಿರ ಕೋಟಿ ರೂ. ನೀಡಿದೆ ಇದು ನಮ್ಮ ಹೋರಾಟಕ್ಕೆ ಸಿಕ್ಕ ಫಲ, ಜನರ ಒತ್ತಡಕ್ಕೆ ಸಿಕ್ಕ ಫಲ ಎಂದು ಅವರು ಹೇಳಿದರು.

ಕೋವಿಡ್ ನಿಂದ ನೋಂದವರಿಗೆ ಮೇಲೆತ್ತುವ ಕೆಲಸ ಮಾಡಿಲ್ಲ, ಸರಕಾರ ಪರಿಹಾರ ಬರೀ ಕಾಗದದ ಮೇಲಷ್ಟೇ ಇದೆ.  ಅದರಲ್ಲೂ ಕೋವಿಡ್ ನಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿ ಅಸ್ತಿತ್ವಕ್ಕಾಗಿಯೇ ಹೋರಾಡುತ್ತಿರುವ ಅಸಂಖ್ಯಾತ ಅಸಂಘಟಿತ ವರ್ಗಕ ಸರ್ಕಾರ ಯಾವುದೇ ಕಾರ್ಯಕ್ರಮ ನೀಡಿಲ್ಲ ಎಂದು ಅವರು ಆಪಾದಿಸಿದರು.

ಬಡವರು ಮತ್ತು ಶ್ರಮಿಕರಿಗೆ ಬಜೆಟ್ ನಲ್ಲಿ ಏನನ್ನೂ ಘೋಷಣೆ ಮಾಡಲೇ ಇಲ್ಲ. ಬಡವರಿಗೆ 5 ಲಕ್ಷ ಮನೆಗಳನ್ನು ಕಟ್ಟಿ ಕೊಡುವ ಭರವಸೆಯನ್ನ ಬಿಜೆಪಿ ನೀಡಿತ್ತು. ಆದರೆ ಇದುವರೆಗೂ ಸರ್ಕಾರಕ್ಕೆ ಒಂದೇ ಒಂದು ಮನೆ ನೀಡಲು ಸಾಧ್ಯವಾಗಲಿಲ್ಲ. ನಮ್ಮ ಸರ್ಕಾರ ಇದ್ದಾಗ ಐದು ವರ್ಷಗಳಲ್ಲಿ ಬಡವರಿಗೆ 1 ಲಕ್ಷಕ್ಕೂ ಅಧಿಕ ಮನೆಗಳನ್ನು  ಕಟ್ಟಿಸಲಾಗಿತ್ತು. ಈಗ 6,500 ಕೋಟಿ ರೂ. ಖರ್ಚು ಮಾಡಿದರೂ ಒಂದೇ ಒಂದು ಮನೆ ಇದುವರೆಗೂ ನೀಡಿಲ್ಲ ಎಂದು ಅವರು ಹೇಳಿದರು.

ನಾರಾಯಣ ಗುರು ಹೆಸರಿನಲ್ಲಿ ಈಗ ವಸತಿ ಶಾಲೆ ತೆರೆಯಲು ಮುಂದಾಗಿದ್ದಾರೆ. ನಾರಾಯಣ ಗುರುಗಳ ಟ್ಯಾಬ್ಲೊ ತಿರಸ್ಕರಿಸದವರು ಈಗ ಜನರ ಆಕ್ರೋಶಕ್ಕೆ ಹೆದರಿ ಈಗ ವಸತಿ ಶಾಲೆ ಕಾರ್ಯಕ್ರಮ ತಂದಿದ್ದಾರೆ. ವಿವಿಯಲ್ಲಿ‌ಅಧ್ಯಯನ ಪೀಠಕ್ಕೆ ದುಡ್ಡು ಇಟ್ಟಿಲ್ಲ ಯಾಕೆ ಎಂದು ಖಾದರ್‍ ಪ್ರಶ್ನಿಸಿದರು.

ಸಾಮರಸ್ಯದ ಸಮಾವೇಶ, ಬಂಧುತ್ವದ ಕಾರ್ಯಕ್ರಮ ಮಾಡಿ ವಿಶ್ವಕ್ಕೆ ಸೋದರತೆಯ ಸಂದೇಶ ನೀಡದೆ ಬಂಡವಾಳ ಹೂಡಿಕೆಯ ನಿರೀಕ್ಷೆ ಮಾಡಲಾಗದು ಎಂದು ಅವರು ಹೇಳಿದರು.

ಬಜೆಟ್ ನಲ್ಲಿ ಕರಾವಳಿಗೆ ಮೋಸ

ಕಳೆದ ಸಲದ ಬಜೆಟ್‌ನಲ್ಲಿ ಮೀನುಗಾರರ ಮನೆಗಾಗಿ ಬಿಡುಗಡೆ ಮಾಡಿರುವ ಹಣ ಇನ್ನೂ ನೀಡಿಲ್ಲ. ಮತ್ತೆ ಅದೇ ಘೋಷಣೆ. ಬಜೆಟ್ ನಲ್ಲಿ 100 ದೊಡ್ಡ ವೆಸೆಲ್ ಬೋಟ್ ಯಾರಿಗೆ? ಒಟ್ಟಿನಲ್ಲಿ ಸರಕಾರ ರಾಜಕೀಯವಾಗಿ, ಆರ್ಥಿಕವಾಗಿ ಅಂಗವಿಕಲವಾಗಿದೆ ಎಂದು ಖಾದರ್‍ ಟೀಕಿಸಿದರು.

ಸರ್ಕಾರ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡ್ತಿವಿ ಎಂದಿದೆ. ಆದರೆ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹಾಳಾಗಿರುವಾಗ, ಸಮಾಜದಲ್ಲಿ ದ್ವೇಷ ಭಾವನ ಬಿತ್ತಿ, ಕೋಮು ಪ್ರಚೋದನೆ ನೀಡುತ್ತಿರುವಾಗ ಯಾರು ಬಂಡವಾಳ ಹೂಡಲು ಬರುತ್ತಾರೆ? ರಕ್ತ ಮಡುವಿನಲ್ಲಿ ಆರ್ಥಿಕತೆ ಎಂದೂ ಸಾಧ್ಯವಿಲ್ಲ. ವಿಷದ ವಾತಾವರಣದಲ್ಲಿ ವಿತ್ತೀಯ ಸಾಧ್ಯವಿಲ್ಲ. ಹೀಗಾಗಿ ಸರ್ಕಾರ ಬಂಡವಾಳ ಹೂಡಿಕೆ ಸಮಾವೇಶಕ್ಕೂ ಮೊದಲು, ಸಾಮರಸ್ಯ ಸಮಾವೇಶ ಮಾಡಬೇಕು ಎಂದು ಯು.ಟಿ.ಖಾದರ್ ಆಗ್ರಹಿಸಿದರು.

ರಥಬೀದಿ ಕಾಲೇಜಿನ ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ಮಕ್ಕಳ ಗಲಾಟೆಯನ್ನು ಜಿಲ್ಲಾಡಳಿತ ಸುಮ್ಮನೆ ಕುಳಿತು ನೋಡುವುದೇ? ಎಂದು ಖಾದರ್ ಪ್ರಶ್ನಿಸಿದರು.

ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿ ತನಿಖೆ ನಡೆಸಿ ಕ್ರಮ ವಹಿಸಬೇಕು. ಅಲ್ಲಿ ವಿದ್ಯಾರ್ಥಿನಿಯರ ಮೇಲೆ ನಡೆದ ದಬ್ಬಾಳಿಕೆಯನ್ನು ಕಾಲೇಜಿನ ಪ್ರಾಂಶುಪಾಲರು, ಆಡಳಿತ ಕಾನೂನು ಪ್ರಕಾರ ಕ್ರಮ ವಹಿಸಬೇಕು. ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯಾಂಶದ ವರದಿ ನೀಡಬೇಕು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‍ ಪಕ್ಷದ ಮುಖಂಡರಾದ ಇಬ್ರಾಹೀ ಕೋಡಿಜಾಲ್, ಮಮತಾ ಗಟ್ಟಿ, ಶಾಹುಲ್ ಹಮೀದ್, ಜಿ.ಎ.ಬಾವಾ, ಸದಾಶಿವ ಉಳ್ಳಾಲ್, ಯೂಸುಫ್ ಶರೀಫ್, ಈಶ್ವರ ಉಳ್ಳಾಲ್, ಆಲ್ವಿನ್, ಮುಸ್ತಫಾ ಮೊದಲಾದವರು ಉಪಸ್ಥಿತರಿದ್ದರು.


SHARE THIS

Author:

0 التعليقات: