ಮುಲ್ಕಿ: ಕಾರ್ಕಳ ವ್ಯಕ್ತಿಯೋರ್ವನನ್ನು ಕಲ್ಲಿನಿಂದ ಜಜ್ಜಿ ಕೊಲೆ
ಮುಲ್ಕಿ: ಕಲ್ಲಿನಿಂದ ಜಜ್ಜಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಲೆಗೈದ ಘಟನೆ ಕಳೆದ ರಾತ್ರಿ ಮುಲ್ಕಿಯ ಬಸ್ ನಿಲ್ದಾಣದ ಬಳಿ ಪೆಟ್ರೋಲ್ ಬಂಕ್ ನಡೆದಿರುವುದು ವರದಿಯಾಗಿದೆ.
ಕೊಲೆಯಾದವರನ್ನು ಕಾರ್ಕಳ ತಾಲೂಕಿನ ಮುಂಡ್ಕೂರು ನಿವಾಸಿ ಹರೀಶ್ ಸಾಲ್ಯಾನ್(45) ಎಂದು ಗುರುತಿಸಲಾಗಿದೆ. ಕೃತ್ಯ ನಡೆದಿರುವುದು ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ಮೃತದೇಹ ಪತ್ತೆಯಾದ ಅಣತಿ ದೂರದಲ್ಲಿ ರಕ್ತಸಿಕ್ತ ಕಲ್ಲು ಸಿಕ್ಕಿದ್ದು ಮೃತರ ಮೊಬೈಲ್ ಕೂಡ ಪತ್ತೆಯಾಗಿದೆ. ಹರೀಶ್ ಸಾಲ್ಯಾನ್ ಕೊಲೆಯಾದ ಸ್ಥಳದಲ್ಲಿ ಚೀಲವೊಂದು ದೊರೆತಿದ್ದು, ಶುಕ್ರವಾರ ರಾತ್ರಿ 8 ಗಂಟೆಗೆ ಬಪ್ಪನಾಡು ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದ ರಸೀದಿ ಮತ್ತು ಪ್ರಸಾದ ಅದರಲ್ಲಿ ಪತ್ತೆಯಾಗಿದೆ.
ಇಂದು ಬೆಳಗ್ಗೆ ಬಸ್ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರು ಮೃತದೇಹ ಗಮನಿಸಿ ಮುಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಎಸಿಪಿ ಮಹೇಶ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
0 التعليقات: