Friday, 18 March 2022

ಚುನಾವಣಾ ಪ್ರಣಾಳಿಕೆಗಳಲ್ಲಿ ನೀಡಿದ ಭರವಸೆ ಈಡೇರಿಸದ ರಾಜಕೀಯ ಪಕ್ಷಗಳಿಗೆ ದಂಡ ವಿಧಿಸಲಾಗುವುದಿಲ್ಲ: ಹೈಕೋರ್ಟ್


 ಚುನಾವಣಾ ಪ್ರಣಾಳಿಕೆಗಳಲ್ಲಿ ನೀಡಿದ ಭರವಸೆ ಈಡೇರಿಸದ ರಾಜಕೀಯ ಪಕ್ಷಗಳಿಗೆ ದಂಡ ವಿಧಿಸಲಾಗುವುದಿಲ್ಲ: ಹೈಕೋರ್ಟ್

ಹೊಸದಿಲ್ಲಿ: ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ವಿಫಲವಾದ ರಾಜಕೀಯ ಪಕ್ಷಗಳಿಗೆ ದಂಡ ವಿಧಿಸಲಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ ಎಂದು ಗುರುವಾರ 'Live Law' ವರದಿ ಮಾಡಿದೆ.

ಪ್ರಣಾಳಿಕೆಗಳಲ್ಲಿ ನೀಡಲಾದ ಭರವಸೆಗಳು "ಬಂಧಿಸುವ ಶಕ್ತಿ" ಯಾಗಿಲ್ಲ ಹಾಗೂ ನ್ಯಾಯಾಲಯಗಳ ಮೂಲಕ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ದಿನೇಶ್ ಪಾಠಕ್ ಅವರಿದ್ದ ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.

1951ರ ಜನತಾ ಪ್ರಾತಿನಿಧ್ಯ ಕಾಯ್ದೆಯಡಿ ರಾಜಕೀಯ ಪಕ್ಷವನ್ನು ನೋಂದಾಯಿಸಲು ಅವಕಾಶವಿದ್ದರೂ, ನೋಂದಣಿಯನ್ನು ರದ್ದುಗೊಳಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ನ್ಯಾಯಾಧೀಶರು ತಿಳಿಸಿದರು.

2020 ರಲ್ಲಿ ಖುರ್ಷಿದುರೆಹಮಾನ್ ಎಸ್. ರೆಹಮಾನ್ ಎಂಬ ವ್ಯಕ್ತಿ ಉತ್ತರ ಪ್ರದೇಶದ ಅಲಿಘರ್ ಜಿಲ್ಲೆಯ ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆಗಿನ ಬಿಜೆಪಿ ಅಧ್ಯಕ್ಷ ಅಮಿತ್ ಶಾ 2014 ರ ಲೋಕಸಭಾ ಚುನಾವಣೆಯ ಚುನಾವಣಾ ಪ್ರಣಾಳಿಕೆಯಲ್ಲಿ ಹಲವಾರು ಭರವಸೆಗಳನ್ನು ನೀಡಿದ್ದರು. ಆದರೆ ಅದನ್ನು ಈಡೇರಿಸಲಾಗಿಲ್ಲ ಎಂದು ಆರೋಪಿಸಿದ್ದರು.

 ಅಲಿಘರ್ ನ್ಯಾಯಾಲಯದ ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಅವರು ಅಕ್ಟೋಬರ್ 2020 ರಲ್ಲಿ ಮನವಿಯನ್ನು ತಿರಸ್ಕರಿಸಿದ್ದರು. ನಂತರ ರೆಹಮಾನ್ ಅವರು ವಿಚಾರಣಾ ನ್ಯಾಯಾಲಯದಲ್ಲಿ ಪರಿಷ್ಕರಣೆ ಮನವಿಯನ್ನು ಸಲ್ಲಿಸಿದ್ದರು. ಅದನ್ನು ವಜಾಗೊಳಿಸಲಾಯಿತು.

ಇದಾದ ಬಳಿಕ ವಿಚಾರಣಾ ನ್ಯಾಯಾಲಯದ ಆದೇಶವನ್ನು ಅವರು ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.


SHARE THIS

Author:

0 التعليقات: