Tuesday, 8 March 2022

ನ್ಯಾಟೋ ಸದಸ್ಯತ್ವದ ಭಿಕ್ಷೆ ಬೇಡುವುದಿಲ್ಲ : ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ


ನ್ಯಾಟೋ ಸದಸ್ಯತ್ವದ ಭಿಕ್ಷೆ ಬೇಡುವುದಿಲ್ಲ : ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ

ವಾಷಿಂಗ್ಟನ್: ನ್ಯಾಟೋ ಸದಸ್ಯತ್ವಕ್ಕೆ ತಮ್ಮ ದೇಶ ಒತ್ತಾಯಿಸುವುದಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.

ಪಾಶ್ಚಿಮಾತ್ಯ-ಪರ ನೆರೆ ರಾಷ್ಟ್ರದ ಮೇಲೆ ರಷ್ಯಾ ಆಕ್ರಮಣ ನಡೆಸಲು, ನ್ಯಾಟೋ ಸದಸ್ಯತ್ವಕ್ಕೆ ಉಕ್ರೇನ್ ಪ್ರಯತ್ನಿಸುತ್ತಿರುವುದು ಕೂಡಾ ಒಂದು ಕಾರಣವಾಗಿತ್ತು.

ರಷ್ಯಾ ಪರವಾಗಿ ಇರುವ ಎರಡು ಪ್ರತ್ಯೇಕತಾವಾದಿ ಗುಂಪುಗಳ ಮಾನ್ಯತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಸಿದ್ಧ ಎಂದು ಝೆಲೆನ್ಸ್ಕಿ ಹೇಳಿಕೆ ನೀಡಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಫೆಬ್ರುವರಿ 24ರಂದು ದಾಳಿ ಆರಂಭಿಸುವ ಮುನ್ನ ಈ ಗುಂಪುಗಳಿಗೆ ಮಾನ್ಯತೆ ನೀಡಿದ್ದರು.

"ನ್ಯಾಟೋ ಎಂದಿಗೂ ಉಕ್ರೇನನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ ಎನ್ನುವುದು ಅರ್ಥವಾದ ಬಳಿಕ ಬಹಳ ಹಿಂದೆಯೇ ಈ ವಿಚಾರದಲ್ಲಿ ನಾವು ತಣ್ಣಗಾಗಿದ್ದೇವೆ" ಎಂದು ಝೆಲೆನ್ಸ್ಕಿ ಎಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಸ್ಪಷ್ಟಪಡಿಸಿದ್ದಾರೆ. "ಈ ಒಕ್ಕೂಟ ವಿವಾದಾತ್ಮಕ ಅಂಶಗಳ ಬಗ್ಗೆ ಮತ್ತು ರಷ್ಯಾ ಜತೆಗಿನ ಸಂಘರ್ಷದ ಬಗ್ಗೆ ಭೀತಿ ಹೊಂದಿದೆ" ಎಂದು ಹೇಳಿದ್ದಾರೆ. ನ್ಯಾಟೋ ಸದಸ್ಯತ್ವ ಬಗ್ಗೆ ಕೇಳಿದ ಪ್ರಶ್ನೆಗೆ "ನಾನು ಮೊಣಕಾಲೂರಿ ಭಿಕ್ಷೆ ಬೇಡುವ ದೇಶದ ಅಧ್ಯಕ್ಷನಲ್ಲ" ಎಂದು ಉತ್ತರ ನೀಡಿದರು.

ಉಕ್ರೇನ್ ನ್ಯಾಟೋ ಸೇರುವುದಕ್ಕೆ ರಷ್ಯಾ ಈಗಾಗಲೇ ತೀವ್ರ ವಿರೋಧ ವ್ಯಕ್ತಪಡಿಸಿದೆ. ಹಿಂದಿನ ಸೋವಿಯತ್ ಯೂನಿಯನ್ ದೇಶಗಳನ್ನು ಓಲೈಸಲು ನ್ಯಾಟೋ ಮುಂದಾಗಿರುವುದು ರಷ್ಯಾವನ್ನು ಕೆರಳಿಸಿದೆ. ರಷ್ಯಾ ಜತೆ ಮಾತುಕತೆಗೆ ಸಿದ್ಧ ಎಂದೂ ಉಕ್ರೇನ್ ಅಧ್ಯಕ್ಷರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


SHARE THIS

Author:

0 التعليقات: