Tuesday, 22 March 2022

ಪೆಟ್ರೋಲ್, ಅಡುಗೆ ಅನಿಲ ಬೆಲೆ ಏರಿಕೆ, ಬಿಜೆಪಿ ಮತ್ತೆ ಜನರ ಪಿಕ್ ಪಾಕೆಟ್ ಮಾಡಲು ಆರಂಭಿಸಿದೆ: ಡಿ.ಕೆ.ಶಿವಕುಮಾರ್


 ಪೆಟ್ರೋಲ್, ಅಡುಗೆ ಅನಿಲ ಬೆಲೆ ಏರಿಕೆ, ಬಿಜೆಪಿ ಮತ್ತೆ ಜನರ ಪಿಕ್ ಪಾಕೆಟ್ ಮಾಡಲು ಆರಂಭಿಸಿದೆ: ಡಿ.ಕೆ.ಶಿವಕುಮಾರ್

ಕಲಬುರಗಿ: ಪೆಟ್ರೋಲ್, ಅಡುಗೆ ಅನಿಲ ಬೆಲೆ ಏರಿಕೆ ಮಾಡುವ ಮೂಲಕ ಬಿಜೆಪಿ ಮತ್ತೆ ಜನರ ಪಿಕ್ ಪಾಕೆಟ್ ಮಾಡಲು ಆರಂಭಿಸಿದೆ. ಚುನಾವಣೆ ನಡೆಯುವಾಗ ಸುಮ್ಮನಿದ್ದರು. ಚುನಾವಣೆ ಮುಗಿದ ನಂತರ ಮತ್ತೆ ಬೆಲೆ ಹೆಚ್ಚಿಸಿದ್ದಾರೆ. ಇಷ್ಟಾದರೂ ಮತದಾರ ಅವರಿಗೆ ಮತ ಹಾಕುತ್ತಿದ್ದಾನೆ. ಎಲ್ಲರಿಗೂ ಒಂದು ತಾಳ್ಮೆ ಇರುತ್ತದೆ. ಅದರಲ್ಲೂ ಹೆಣ್ಣು ಮಕ್ಕಳು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಗಾರಿದರು.

ಮಂಗಳವಾರ ಕಲಬುರಗಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸರಕಾರ ರೈತರ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದರು. ಆದರೆ ವೆಚ್ಚ ಡಬಲ್ ಆಗಿದೆ. ಯಾರ ಆದಾಯವೂ ಡಬಲ್ ಆಗಿಲ್ಲ. ಬೆಲೆ ಏರಿಕೆ ವಿರೋಧಿಸಿ ಪಿಕ್ ಪಾಕೆಟ್ ಸರಕಾರದ ವಿರುದ್ಧ ವ್ಯಾಪಕ ಕಾರ್ಯಕ್ರಮ ರೂಪಿಸಿ ಅದನ್ನು ಶೀಘ್ರದಲ್ಲೇ ಪ್ರಕಟಿಸುತ್ತೇನೆ ಎಂದರು.

ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡುತ್ತೇನೆ. ಯಾವುದೇ ಕಾರಣಕ್ಕೂ ನೀವು ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಹೆಚ್ಚಳಕ್ಕೆ ಅವಕಾಶ ನೀಡಬಾರದು. ಡಬಲ್ ಇಂಜಿನ್ ಸರಕಾರ ಹೆಚ್ಚಿಸುತ್ತಿರುವ ಬೆಲೆ ಏರಿಕೆ ತಡೆಯಲು ರಾಜ್ಯ ಸರಕಾರವೇ ಸಬ್ಸಿಡಿಯನ್ನು ನೀಡಿ ನಿಯಂತ್ರಣ ಮಾಡಬೇಕು. ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ ಎಂದು ಅವರು ಆಗ್ರಹಿಸಿದರು.

ರಾಜ್ಯದಲ್ಲಿ ಬಿಡಿಎ ದಲ್ಲಾಳಿಗಳ ಮೇಲೆ ದಾಳಿ ಮಾಡುವಷ್ಟು ಭ್ರಷ್ಟಾಚಾರ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಈ ಸರಕಾರ ಭ್ರಷ್ಟಾಚಾರವನ್ನು ಉತ್ತುಂಗಕ್ಕೆ ಕೊಂಡೊಯ್ದಿದೆ. ನಮ್ಮ ಪ್ರಿಯಾಂಕ್ ಖರ್ಗೆ ಅವರು ಮಾಧ್ಯಮಗೋಷ್ಠಿ ನಡೆಸಿ ಬಡವರಿಗೆ, ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ದಲಿತರ ವಿವಿಧ ನಿಗಮಗಳಲ್ಲಿ ಕೊಳವೆ ಬಾವಿ ಕೊರೆದುಕೊಡುವ ಗಂಗಾ ಕಲ್ಯಾಣ ಯೋಜನೆಯಲ್ಲಿ ಅಡಿಗೆ ಸುಮಾರು 300 ರೂ.ಲೆಕ್ಕದಲ್ಲಿ 90 ಸಾವಿರ ರೂ. ಮೊತ್ತದ ಕೊಳವೆ ಬಾವಿ ನಿರ್ಮಾಣ ಕಾಮಗಾರಿಯ ಮೊತ್ತವನ್ನು ಸುಮಾರು 1.80 ಲಕ್ಷಕ್ಕೆ ಅಂದರೆ ಡಬಲ್ ಮಾಡಿ ಗುತ್ತಿಗೆದಾರರಿಗೆ ನೀಡಲಾಗಿದೆ. ಆ ಮೂಲಕ ಈ ಸರಕಾರ  ಭ್ರಷ್ಟಾಚಾರದಲ್ಲಿ ಶೇ.40 ರಿಂದ 100ಕ್ಕೆ ಭಡ್ತಿ ಪಡೆದಿದೆ ಎಂದರು.

ರೈತನ ಕೊಳವೆ ಬಾವಿಯಲ್ಲಿ ಶೇ.100ರಷ್ಟು  ಭ್ರಷ್ಟಾಚಾರ ಮಾಡುತ್ತಿದ್ದಾರೆ. ಗುತ್ತಿಗೆದಾರರಿಂದ ಶೇ.40ರಷ್ಟು ಲಂಚ ಪಡೆಯುತ್ತಿದ್ದಾರೆ. ಮೊನ್ನೆ ಮಾಧ್ಯಮದಲ್ಲಿ ಆರೋಗ್ಯ ಇಲಾಖೆ ಅಕ್ರಮದ ಬಗ್ಗೆ ವರದಿ ಬಂದಿದೆ. ರಾಜ್ಯ ಸರಕಾರದ  ಭ್ರಷ್ಟಾಚಾರಕ್ಕೆ ಪ್ರಧಾನಿ ಮೋದಿ ಅವರೇ ಅತ್ಯುನ್ನತ ಪ್ರಶಸ್ತಿಯನ್ನು ನೀಡಬೇಕಿದೆ. ಎಲ್ಲರೂ ಸೇರಿ  ಭ್ರಷ್ಟಾಚಾರ ಮಾಡುತ್ತಿದ್ದಾರೆ' ಎಂದು ಶಿವಕುಮಾರ್ ದೂರಿದರು.


SHARE THIS

Author:

0 التعليقات: