ಉಕ್ರೇನ್ ನಾಗರಿಕ ಪ್ರದೇಶಗಳ ಮೇಲೆ ದಾಳಿ ತೀವ್ರಗೊಳಿಸಿದ ರಷ್ಯಾ
ಕೀವ್ : ರಷ್ಯಾ- ಉಕ್ರೇನ್ ಯುದ್ಧದ ಏಳನೇ ದಿನ ಉಕ್ರೇನ್ ಮೇಲಿನ ದಾಳಿ ಮತ್ತಷ್ಟು ತೀವ್ರಗೊಂಡಿದೆ. ದೊಡ್ಡ ಪ್ರಮಾಣದಲ್ಲಿ ರಷ್ಯನ್ ಟ್ಯಾಂಕ್ಗಳು ಮತ್ತು ಶಸ್ತ್ರಸಜ್ಜಿತ ವಾಹನಗಳು ಉಕ್ರೇನ್ ರಾಜಧಾನಿ ಕೀವ್ಗೆ ಮುಖ ಮಾಡಿವೆ. ಈ ಪ್ರದೇಶದಲ್ಲಿ ಹೋರಾಟ ತೀವ್ರಗೊಂಡಿದ್ದು, ಇತರ ದೊಡ್ಡ ನಗರಗಳಲ್ಲಿ ಕೂಡಾ ಸಂಘರ್ಷ ನಡೆಯುತ್ತಿದೆ.
40 ಮೈಲು ಉದ್ದದ ರಷ್ಯನ್ ಸೇನಾ ತುಕಡಿಗಳು ಉಕ್ರೇನ್ ರಾಜಧಾನಿ ಕೀವ್ ನಗರವನ್ನು ಸಮೀಪಿಸುತ್ತಿರುವ ಉಪಗ್ರಹ ಚಿತ್ರವನ್ನು ರಾಯ್ಟರ್ ಬಿಡುಗಡೆ ಮಾಡಿದೆ.
ಕೀವ್ ನಗರ, ಎರಡನೇ ಅತಿ ದೊಡ್ಡ ನಗರವಾದ ಖರ್ಕೀವ್ ಮತ್ತು ಪ್ರಮುಖ ಸ್ಥಳಗಳ ಮೇಲೆ ಶೆಲ್ ದಾಳಿಯನ್ನು ರಷ್ಯಾ ತೀವ್ರಗೊಳಿಸಿದ್ದು, ದಾಳಿಯಿಂದ ಕನಿಷ್ಠ 11 ಮಂದಿ ನಾಗರಿಕರು ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ. ಕೀವ್ನ ಪ್ರಮುಖ ಟಿವಿ ಟವರ್ ಮತ್ತು ಸಾಮೂಹಿಕ ಹತ್ಯಾಕಾಂಡ ಸ್ಮಾರಕದ ಮೇಲೆ ಕೂಡಾ ದಾಳಿ ನಡೆದಿದೆ.
ರಷ್ಯನ್ ದಾಳಿಯಲ್ಲಿ ಹಾವೇರಿಯ ವಿದ್ಯಾರ್ಥಿ ಮೃತಪಟ್ಟ ಬೆನ್ನಲ್ಲೇ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಯುದ್ಧಪೀಡಿತ ಪ್ರದೇಶದಿಂದ ಕರೆ ತರುವ ಪ್ರಯತ್ನವನ್ನು ಭಾರತ ಸರ್ಕಾರ ತೀವ್ರಗೊಳಿಸಿದೆ. ಇನ್ನೂ 4,000 ಭಾರತೀಯ ವಿದ್ಯಾರ್ಥಿಗಳು ಸಿಲುಕಿ ಹಾಕಿಕೊಂಡಿದ್ದು, ಇವರ ಸುರಕ್ಷಿತ ತೆರವಿಗಾಗಿ ಮೊಲ್ಡೋವಾ ಗಡಿಯನ್ನು ತೆರೆಯಲಾಗಿದೆ. ಸೂಕ್ತ ವಸತಿ ಮತ್ತು ಆಹಾರ ವ್ಯವಸ್ಥೆಯನ್ನು ಮಾಡಲಾಗುವುದು. ಅವರನ್ನು ಬುಚರೆಸ್ಟ್ ಮೂಲಕ ಭಾರತಕ್ಕೆ ಕರೆತರುವ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಹೇಳಿದ್ದಾರೆ.
ಏತನ್ಮಧ್ಯೆ ಅಮೆರಿಕದ ವಾಯುಪ್ರದೇಶದಲ್ಲಿ ರಷ್ಯನ್ ವಿಮಾನಗಳ ಹಾರಾಟವನ್ನು ನಿಷೇಧಿಸಿ ಅಧ್ಯಕ್ಷ ಜೋ ಬೈಡನ್ ಆದೇಶ ನೀಡಿದ್ದಾರೆ. ಯುದ್ಧದಿಂದ ಕಂಗೆಟ್ಟಿರುವ ಉಕ್ರೇನ್ಗೆ 300 ಕೋಟಿ ಡಾಲರ್ಗಳ ತುರ್ತು ನೆರವಿನ ಪ್ಯಾಕೇಜ್ ನೀಡಲು ವಿಶ್ವಸಂಸ್ಥೆ ಸಜ್ಜಾಗಿದೆ.
0 التعليقات: