Tuesday, 22 March 2022

ಬರಿಗಾಲಿನಲ್ಲಿ ಬಂದು ಸಾಷ್ಟಾಂಗ ಪ್ರಣಾಮ ಸಲ್ಲಿಸಿ ಪದ್ಮಶ್ರೀ ಸ್ವೀಕರಿಸಿದ 125 ವರ್ಷದ ಯೋಗ ಗುರು ಸ್ವಾಮಿ ಶಿವಾನಂದ


 ಬರಿಗಾಲಿನಲ್ಲಿ ಬಂದು ಸಾಷ್ಟಾಂಗ ಪ್ರಣಾಮ ಸಲ್ಲಿಸಿ ಪದ್ಮಶ್ರೀ ಸ್ವೀಕರಿಸಿದ 125 ವರ್ಷದ ಯೋಗ ಗುರು ಸ್ವಾಮಿ ಶಿವಾನಂದ

 ಹೊಸದಿಲ್ಲಿ: ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‍ನಲ್ಲಿ ಸೋಮವಾರ  ನಡೆದ ಸಮಾರಂಭದಲ್ಲಿ ಬರಿಗಾಲಿನಲ್ಲಿಯೇ ನಡೆದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪದ್ಮ ಶ್ರೀ ಪ್ರಶಸ್ತಿ ಸ್ವೀಕರಿಸಿದ 125 ವರ್ಷದ ಯೋಗ ಗುರು ಸ್ವಾಮಿ ಶಿವಾನಂದ ಎಲ್ಲರ ಗಮನ ಸೆಳೆದಿದ್ದಾರೆ. ಪ್ರಶಸ್ತಿ ಸ್ವೀಕರಿಸುವ ಮುನ್ನ ಸ್ವಾಮಿ ಶಿವಾನಂದ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿಗಳಿಗೆ ಸಾಷ್ಟಾಂಗ ಪ್ರಣಾಮ ಮಾಡುತ್ತಿದ್ದಂತೆಯೇ ಅಲ್ಲಿ ನೆರೆದಿದ್ದವರು ಕರತಾಡನ ಮಾಡಿದರು.

ತಮ್ಮೆದುರು ಸ್ವಾಮಿ ಶಿವಾನಂದ ಸಾಷ್ಟಾಂಗ ಪ್ರಣಾಮ ಮಾಡುತ್ತಿದ್ದಂತೆಯೇ ಎದ್ದು ನಿಂತ ಪ್ರಧಾನಿ ನರೇಂದ್ರ ಮೋದಿ ಕೂಡ ತಲೆಬಗ್ಗಿಸಿ ನೆಲ ಮುಟ್ಟಿ ನಮಸ್ಕರಿಸಿದರು.

ವೇದಿಕೆ ಬಳಿ ಆಗಮಿಸುತ್ತಿದ್ದಂತೆಯೇ ಮತ್ತೆ ನೆಲಕ್ಕೆ ಮಂಡಿಯೂರಿ ಪ್ರಣಾಮ ಮಾಡಿದ ಯೋಗ ಗುರು ಅವರ ಬಳಿ ತೆರಳಿ ಅವರನ್ನು ಮೇಲಕ್ಕೆತ್ತಿ ಅವರಿಗೆ ರಾಷ್ಟ್ರಪತಿಗಳು ಪ್ರಶಸ್ತಿ ಹಸ್ತಾಂತರಿಸಿದರು.

ತಮ್ಮ ಜೀವನವನ್ನು ಸಮಾಜದ ಕಲ್ಯಾಣಕ್ಕೆ ಮುಡಿಪಾಗಿರಿಸಿರುವ ಸ್ವಾಮಿ ಶಿವಾನಂದ ಅವರು ಅವಿಭಜಿತ ಭಾರತದ, ಈಗ ಬಾಂಗ್ಲಾದೇಶದ ಭಾಗವಾಗಿರುವ ಸಿಲ್ಹೆಟ್ ಜಿಲ್ಲೆಯಲ್ಲಿ ಆಗಸ್ಟ್ 8, 1896ರಂದು ಜನಿಸಿದರು. ತಮ್ಮ ಆರನೇ ವರ್ಷದಲ್ಲಿ ಹೆತ್ತವರನ್ನು ಅವರು ಕಳೆದುಕೊಂಡಿದ್ದರು. ಕಡು ಬಡತನದಲ್ಲಿದ್ದ ಅವರನ್ನು ಅವರ ಹೆತ್ತವರ ನಿಧನಾನಂತರ ಪಶ್ಚಿಮ ಬಂಗಾಳದ ನಬದ್ವೀಪ್ ಎಂಬಲ್ಲಿರುವ ಗುರೂಜಿ ಆಶ್ರಮಕ್ಕೆ ಕರೆತರಲಾಗಿತ್ತು. ಅಲ್ಲಿ ಗುರು ಓಂಕಾರಾನಂದ ಸ್ವಾಮಿ ಅವರನ್ನು ಬೆಳೆಸಿ ಅವರಿಗೆ ಶಿಕ್ಷಣ ಒದಗಿಸಿದ್ದರು.

ಅವರ ಆರೋಗ್ಯದ ಗುಟ್ಟು ಹಾಗೂ ಅವರ ದೀರ್ಘಾಯುಷ್ಯ ಅನೇಕ ಅಧ್ಯಯನಗಳಿಗೆ ಕಾರಣವಾಗಿ ಕಾರ್ಪೊರೇಟ್ ಆಸ್ಪತ್ರೆಗಳು ಸಹ ಅವರ ಆರೋಗ್ಯ ಹಾಗೂ ಅವರ ದೈಹಿಕ ಸ್ಥಿತಿಗತಿಗಳನ್ನು ಅರಿಯಲು ಅವರನ್ನು ತಪಾಸಣೆಗೆ ಒಳಪಡಿಸಿದ್ದವು.

ಸಮಾಜಸೇವೆಗೆ ತಮ್ಮನ್ನು ಮುಡಿಪಾಗಿಸಿರುವ ಸ್ವಾಮಿ ಶಿವಾನಂದ ಪುರಿಯಲ್ಲಿ ಹಲವಾರು  ಕುಷ್ಠ ರೋಗಿಗಳ ಆರೈಕೆಯನ್ನೂ ಮಾಡುತ್ತಿದ್ದಾರೆ. ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿರುವ ಅವರು 2019ರಲ್ಲಿ ಯೋಗ ರತ್ನ ಪ್ರಶಸ್ತಿಯನ್ನೂ ಗಳಿಸಿದ್ದಾರೆ.


SHARE THIS

Author:

0 التعليقات: