ಉತ್ತರಾಖಂಡದ ನೂತನ ಶಾಸಕರು ಸೋಮವಾರ ಬೆಳಗ್ಗೆ 11 ಗಂಟೆಗೆ ಪ್ರಮಾಣ ವಚನ ಸ್ವೀಕಾರ
ಡೆಹ್ರಾಡೂನ್: ಇತ್ತೀಚೆಗಷ್ಟೇ ನಡೆದ ಉತ್ತರಾಖಂಡ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ 11 ಗಂಟೆಗೆ ಡೆಹ್ರಾಡೂನ್ನ ವಿಧಾನಸೌಧದಲ್ಲಿ ನಡೆಯಲಿರುವ ಸಮಾರಂಭದಲ್ಲಿ ನೂತನವಾಗಿ ಆಯ್ಕೆಯಾದ ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಉತ್ತರಾಖಂಡ ವಿಧಾನಸಭೆಯ ಹಂಗಾಮಿ ಸ್ಪೀಕರ್ ಬನ್ಸಿಧರ್ ಭಗತ್ ಅವರು ಇದನ್ನು ಖಚಿತಪಡಿಸಿದ್ದಾರೆ
ಸಂಜೆ ನಡೆಯಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ರಾಜ್ಯದ ಮುಂದಿನ ಮುಖ್ಯಮಂತ್ರಿಯನ್ನು ನಿರ್ಧರಿಸಲಾಗುವುದು ಎಂದು ಉತ್ತರಾಖಂಡ ಬಿಜೆಪಿ ಮುಖ್ಯಸ್ಥ ಮದನ್ ಕೌಶಿಕ್ ಹೇಳಿದ್ದಾರೆ.
“ಮುಖ್ಯಮಂತ್ರಿ ಆಯ್ಕೆಗಾಗಿ ನಮಗೆ ಹಲವು ಆಯ್ಕೆಗಳಿವೆ” ಎಂದು ರವಿವಾರ ಬೆಳಗ್ಗೆ ಉತ್ತರಾಖಂಡ್ನ ಮಾಜಿ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಇಂಡಿಯಾ ಟುಡೇಗೆ ತಿಳಿಸಿದರು.
ಉತ್ತರಾಖಂಡದಲ್ಲಿ ನಡೆದ ಚುನಾವಣೆಯಲ್ಲಿ 70 ವಿಧಾನಸಭಾ ಸ್ಥಾನಗಳ ಪೈಕಿ 47 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಅಧಿಕಾರವನ್ನು ಉಳಿಸಿಕೊಂಡಿದೆ. ಕಾಂಗ್ರೆಸ್ 19 ಸ್ಥಾನಗಳೊಂದಿಗೆ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಆದರೆ, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಖತಿಮಾ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಭುವನ್ ಚಂದ್ರ ಕಪ್ರಿ ವಿರುದ್ಧ 6,579 ಮತಗಳ ಅಂತರದಿಂದ ಸೋತಿದ್ದಾರೆ.
0 التعليقات: