ಉಕ್ರೇನ್ ಮೇಲೆ ರಷ್ಯಾ ದಾಳಿ ಬಗ್ಗೆ ಮನವರಿಕೆಯಾಗಿದೆ: ಜೋ ಬೈಡನ್
ವಾಷಿಂಗ್ಟನ್: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಉಕ್ರೇನ್ನ ರಾಜಧಾನಿ ಮೇಲೆ ದಾಳಿ ಸೇರಿದಂತೆ ದೇಶದ ಮೇಲೆ ಆಕ್ರಮಣ ನಡೆಸುವ ಬಗ್ಗೆ ನನಗೆ ಸಂಪೂರ್ಣ ಮನವರಿಕೆಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಶುಕ್ರವಾರ ಹೇಳಿಕೆ ನೀಡಿದ್ದಾರೆ.
ಸೇನೆ ಜಮಾವಣೆಯಾಗಿರುವ ಗಡಿಯುದ್ದಕ್ಕೂ ಉದ್ವಿಗ್ನತೆ ಮುಂದುವರಿದಿದ್ದು, ದಾಳಿಗೆ ಪೀಠಿಕೆಯಾಗಿ "ಫಾಲ್ಸ್ ಫ್ಲ್ಯಾಗ್" ಕಾರ್ಯಾಚರಣೆ ನಡೆಸಲಾಗಿದೆ ಎಂದು ಪಾಶ್ಚಿಮಾತ್ಯ ದೇಶಗಳು ಬಣ್ಣಿಸಿವೆ.
ಶೆಲ್ ದಾಳಿಯಿಂದ ಮಾನವೀಯ ನೆರವಿನ ತಂಡದ ವಾಹನಕ್ಕೆ ಧಕ್ಕೆ ಉಂಟಾಗಿದ್ದು, ರಷ್ಯಾ-ಪರ ದಂಗೆಕೋರರು ಸಂಘರ್ಷದ ವಲಯದಿಂದ ನಾಗರಿಕರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಪೂರ್ವ ನಗರವಾದ ಡೊನೆಕ್ನಲ್ಲಿ ಕಾರು ಬಾಂಬ್ ಸ್ಫೋಟಿಸಿದೆ. ಆದರೆ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ದಾಳಿ ನಡೆಸುವ ಬಗ್ಗೆ ಪುಟಿನ್ ಅಂತಿಮ ನಿರ್ಧಾರ ಕೈಗೊಂಡಿರುವ ಬಗ್ಗೆ ಇನ್ನೂ ದೃಢಪಟ್ಟಿಲ್ಲ ಎಂದು ಅಮೆರಿಕ ಕಳೆದ ಒಂದು ವಾರದಿಂದ ಹೇಳಿಕೆ ನೀಡುತ್ತಾ ಬಂದಿತ್ತು. ಆದರೆ ಈ ಅಂದಾಜಿಸುವಿಕೆ ಬದಲಾಗಿದೆ ಎಂದು ಅಮೆರಿಕದ ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಬೈಡನ್ ಹೇಳಿದ್ದಾರೆ.
"ಸದ್ಯಕ್ಕೆ ಅವರು ದಾಳಿಯ ನಿರ್ಧಾರ ಮಾಡಿರುವ ಬಗ್ಗೆ ನನಗೆ ಮನವರಿಕೆಯಾಗಿದೆ. ಅದನ್ನು ನಂಬಲು ಸಾಕಷ್ಟು ಕಾರಣಗಳಿವೆ. ಮುಂದಿನ ದಿನಗಳಲ್ಲಿ ಈ ದಾಳಿ ನಡೆಯಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
0 التعليقات: