ಉಕ್ರೇನ್ ನ ಚೆರ್ನೋಬಿಲ್ ಅಣು ವಿದ್ಯುತ್ ಸ್ಥಾವರ ವಶಪಡಿಸಿಕೊಂಡ ರಶ್ಯಾ
ಕೀವ್: ಉಕ್ರೇನ್ನ ಚೆರ್ನೋಬಿಲ್ ಅಣು ವಿದ್ಯುತ್ ಸ್ಥಾವರವನ್ನು ರಷ್ಯಾದ ಪಡೆಗಳು ವಶಪಡಿಸಿಕೊಂಡಿವೆ. "ರಶ್ಯಾದ ಅರ್ಥಹೀನ ದಾಳಿಯ ಬಳಿಕ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರ ಸುರಕ್ಷಿತವಾಗಿದೆ ಎಂದು ಹೇಳುವುದು ಅಸಾಧ್ಯ" ಎಂದು ಉಕ್ರೇನ್ ಅಧ್ಯಕ್ಷೀಯ ಕಚೇರಿಯ ಸಲಹೆಗಾರ ಮೈಖೈಲೊ ಪೊಡೊಲ್ಯಾಕ್ ಹೇಳಿದ್ದಾರೆ
ನೌಕಾ ದಳ, ವಾಯು ಸೇನೆ ಮತ್ತು ಭೂಸೇನೆ ಮೂಲಕ ಉಕ್ರೇನ್ ಮೇಲೆ ದಾಳಿ ನಡೆಸುತ್ತಿರುವ ರಶ್ಯಾ ಪಡೆಗಳು ಚೆರ್ನೋಬಿಲ್ ಅಣು ವಿದ್ಯುತ್ ಸ್ಥಾವರವನ್ನು ವಶಪಡಿಸಿಕೊಂಡಿದೆ. ಇದು ಎರಡನೇ ಮಹಾಯುದ್ಧದ ನಂತರದ ಯುರೋಪಿಯನ್ ರಾಷ್ಟ್ರವೊಂದರ ಮೇಲೆ ನಡೆದ ಅತಿದೊಡ್ಡ ದಾಳಿ ಎನ್ನಲಾಗಿದೆ.
ಗುರುವಾರ ಉಕ್ರೇನ್ ಗಡಿ ದಾಟುವ ಮೊದಲೇ ಚೆರ್ನೋಬಿಲ್ನಲ್ಲಿ ರಶ್ಯಾದ ಕೆಲವು ಮಿಲಿಟರಿ ಪಡೆಗಳು ಜಮಾವಣೆ ಆಗಿದ್ದವು. ನ್ಯಾಟೊಗೆ ಮಿಲಿಟರಿ ಹಸ್ತಕ್ಷೇಪ ಮಾಡದಂತೆ ಸೂಚಿಸಲು ಚೆರ್ನೋಬಿಲ್ ಪರಮಾಣು ರಿಯಾಕ್ಟರ್ ಅನ್ನು ನಿಯಂತ್ರಿಸಲು ರಶ್ಯಾ ಬಯಸಿದೆ ಎಂದು ರಶ್ಯಾದ ಭದ್ರತಾ ಮೂಲವು ತಿಳಿಸದ್ದಾಗಿ ವರದಿಯಾಗಿದೆ.
ಸಂಘರ್ಷದಲ್ಲಿ ಮೊದಲ ದಿನ 137 ಮಂದಿ ಪ್ರಾಣ ತೆತ್ತಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದಾರೆ.
ರಶ್ಯಾ ದಾಳಿಯನ್ನು ಅಮೆರಿಕ ಬಲವಾಗಿ ಖಂಡಿಸಿದ್ದು, ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪುಟಿನ್ ತೀರಾ ಕೀಳು ವ್ಯಕ್ತಿ ಎಂದು ಬೈಡನ್ ವಾಗ್ದಾಳಿ ನಡೆಸಿದ್ದಾರೆ. ರಶ್ಯಾ ಉಕ್ರೇನ್ ಸರ್ಕಾರವನ್ನು ವಜಾ ಮಾಡಲು ಹುನ್ನಾರ ನಡೆಸಿದೆ ಎಂದು ಅಮೆರಿಕದ ರಕ್ಷಣಾ ಅಧಿಕಾರಿಗಳು ಹೇಳಿದ್ದಾರೆ.
0 التعليقات: