ಅಶಾಂತಿ ಮೂಡಿಸುವುದೇ ಬಿಜೆಪಿ ಕೆಲಸ: ಡಿ.ಕೆ.ಶಿವಕುಮಾರ್
ಮಂಗಳೂರು: ದೇಶ, ರಾಜ್ಯ, ಮಕ್ಕಳಲ್ಲಿ ಅಶಾಂತಿ ಮೂಡಿಸುವುದು ಬಿಜೆಪಿಯವರ ಕೆಲಸವಾಗಿದ್ದು, ಮೊದಲಿನಿಂದಲೂ ಅವರು ಇದನ್ನೇ ಮಾಡಿಕೊಂಡು ಬರುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಮಂಗಳೂರಿಗೆ ಇಂದು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಕರಾವಳಿ ಭಾಗದಲ್ಲಿ ಹಿಜಾಬ್ ವಿಚಾರವಾಗಿ ಬಿಜೆಪಿ ನಾಯಕರ ಟೀಕೆ ಕುರಿತಂತೆ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಸದಾ ಕಾಂಗ್ರೆಸ್ ವಿರುದ್ಧ ಆರೋಪ, ಟೀಕೆ ಮಾಡುವುದೇ ಬಿಜೆಪಿಯವರ ಕೆಲಸ. ದೇಶ, ರಾಜ್ಯ, ಮಕ್ಕಳಲ್ಲಿ ಅಶಾಂತಿ ಮೂಡಿಸುವುದು ಅವರ ಕೆಲಸವಾಗಿದ್ದು ಮೊದಲಿನಿಂದಲೂ ಅವರು ಇದನ್ನೇ ಮಾಡಿಕೊಂಡು ಬರುತ್ತಿದ್ದಾರೆ. ಈ ವಿಚಾರವಾಗಿ ಪತ್ರಿಕಾಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡುತ್ತೇನೆ' ಎಂದು ಉತ್ತರಿಸಿದರು.
'ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದು, ದೇಶ ಈಗ ಅತ್ಯಂತ ಸಂಕಷ್ಟದ ಪರಿಸ್ಥಿತಿಗೆ ಸಿಲುಕಿದೆ. ದೇಶವನ್ನು ಮರುನಿರ್ಮಾಣ ಮಾಡಬೇಕಾಗಿದೆ. ದೇಶಕ್ಕೆ ಕಾಂಗ್ರೆಸ್ ಪಕ್ಷದ ಅಗತ್ಯವಿದೆ. ಹೀಗಾಗಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ಸದಸ್ಯತ್ವ ಅಭಿಯಾನ ಆರಂಭಿಸಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಪಕ್ಷದಲ್ಲಿ ಬ್ಲಾಕ್, ಜಿಲ್ಲಾ ಪದಾಧಿಕಾರಿಗಳ ಚುನಾವಣೆ ನಿಗದಿಯಾಗಿದ್ದು, ಈಗ ಸದಸ್ಯತ್ವ ನೋಂದಣಿ ಮಾಡಿಕೊಂಡರೆ ಮತದಾನದ ಹಕ್ಕು ನೀಡಲಾಗುವುದು. ಇದಕ್ಕಾಗಿ 40 ಬೂತ್ಗಳಿಗೆ ಒಬ್ಬ ಮುಖ್ಯ ನೋಂದಣಿದಾರರನ್ನು ನೇಮಕ ಮಾಡಿದ್ದೇವೆ. ಮುಂದಿನ ಚುನಾವಣೆ ಸಂದರ್ಭ ಟಿಕೆಟ್ ನೀಡುವ ವಿಚಾರದಲ್ಲಿ ಪಕ್ಷದ ಸದಸ್ಯರ ಅಭಿಪ್ರಾಯ ಕೇಳಲು ಅನುಕೂಲವಾಗಲಿದೆ. ಕಾಂಗ್ರೆಸ್ ಕಾರ್ಯಕರ್ತರ ಭಾವನೆ ಪಕ್ಷದ ರಾಜ್ಯಾಧ್ಯಕ್ಷರ ಭಾವನೆಯಾಗಬೇಕು. ಯಾರು ನಮ್ಮ ನಾಯಕರಾಗಬೇಕು ಎಂಬುದರ ಬಗ್ಗೆ ಕಾರ್ಯಕರ್ತರ ಅಭಿಪ್ರಾಯವನ್ನು ಆನ್ಲೈನ್ ಮೂಲಕ ಸಂಗ್ರಹಿಸಲು ಅನುಕೂಲವಾಗುವಂತೆ ಡಿಜಿಟಲ್ ಸದಸ್ಯತ್ವ ನೋಂದಣಿ ಆರಂಭಿಸಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಸಿದ್ಧಾಂತ, ನಾಯಕತ್ವದಲ್ಲಿ ನಂಬಿಕೆ ಇರುವವರು 5 ರೂ. ಕೊಟ್ಟು ಸದಸ್ಯರಾಗಬಹುದು. ಗುರುತಿನ ಚೀಟಿ ಪಡೆಯಲು ಇಚ್ಛಿಸುವವರು ಜಿಲ್ಲಾ ಕಾಂಗ್ರೆಸ್ ನಲ್ಲಿ 10 ರೂ. ನೀಡಿ ಪಡೆಯಬಹುದು. ಸದಸ್ಯತ್ವ ವಿಚಾರದಲ್ಲಿ ಮುಖ್ಯ ನೋಂದಣಿದಾರರನ್ನು ಭೇಟಿ ಮಾಡಿ, ಪ್ರತಿಯೊಬ್ಬರಿಗೂ ಬೂತ್ಗಳನ್ನು ಹಂಚಲು, ಅವರೊಂದಿಗೆ ಚರ್ಚೆ ಮಾಡಲು ಮಂಗಳೂರು ಹಾಗೂ ಉಡುಪಿಗೆ ಭೇಟಿ ನೀಡುತ್ತಿದ್ದೇನೆ ಎಂದು ಅವರು ತಿಳಿಸಿದರು.
0 التعليقات: