Tuesday, 22 February 2022

ರಾಷ್ಟ್ರಧ್ವಜ ಕುರಿತು ವಿವಾದಿತ ಹೇಳಿಕೆ ವಿಚಾರ: ಈಶ್ವರಪ್ಪ ವಜಾಕ್ಕೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಕಾಂಗ್ರೆಸ್ ನಿಯೋಗ


 ರಾಷ್ಟ್ರಧ್ವಜ ಕುರಿತು ವಿವಾದಿತ ಹೇಳಿಕೆ ವಿಚಾರ: ಈಶ್ವರಪ್ಪ ವಜಾಕ್ಕೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಕಾಂಗ್ರೆಸ್ ನಿಯೋಗ

ಬೆಂಗಳೂರು: ‘ರಾಷ್ಟ್ರಧ್ವಜದ ಕುರಿತು ದೇಶದ್ರೋಹದ ಹೇಳಿಕೆ ನೀಡಿದ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡುವಂತೆ ಮತ್ತು ಶಿವಮೊಗ್ಗದಲ್ಲಿ ನಡೆದ ಸರಕಾರಿ ಪ್ರಾಯೋಜಿತ ಶವದ ಮೆರವಣಿಗೆ ಮತ್ತು ದಾಂಧಲೆಗಳ ಕುರಿತಂತೆ ನ್ಯಾಯಾಂಗ ತನಿಖೆ ನಡೆಸುವಂತೆ ಸರಕಾರಕ್ಕೆ ಸೂಚನೆ ನೀಡಬೇಕು' ಎಂದು ಒತ್ತಾಯಿಸಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಶಾಸಕರ ನಿಯೋಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿದೆ.

ಮಂಗಳವಾರ ವಿಧಾನ ಮಂಡಲ ಅಧಿವೇಶನ ಮುಂದೂಡಿಕೆ ಹಿನ್ನೆಲೆಯಲ್ಲಿ ವಿಧಾನಸೌಧದಿಂದ ರಾಜಭವನದ ವರೆಗೆ ಪಾದಯಾತ್ರೆ ನಡೆಸಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷದ ಶಾಸಕರ ನಿಯೋಗ, ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಆ ಬಳಿಕ ಮಾತನಾಡಿದ ಸಿದ್ದರಾಮಯ್ಯ, ‘ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಸಚಿವ ಈಶ್ವರಪ್ಪ ರಾಷ್ಟ್ರಧ್ವಜ ಕುರಿತಾದ ಹೇಳಿಕೆಯನ್ನು ಖಂಡಿಸಿದ್ದಾರೆ. ಅದೊಂದು ಬೇಜವಾಬ್ದಾರಿತನದ ಹೇಳಿಕೆ ಎಂದಿದ್ದಾರೆ. ಈಶ್ವರಪ್ಪ ಅವರಿಗೆ ಕರೆ ಮಾಡಿ ಛೀಮಾರಿ ಹಾಕಿದ್ದಾಗಿಯೂ ಮಾಧ್ಯಮಗಳು ವರದಿ ಮಾಡಿವೆ. ಆದರೂ ಇದುವರೆಗೂ ಬಿಜೆಪಿಯ ರಾಷ್ಟ್ರೀಯ, ರಾಜ್ಯ ಮುಖಂಡರು ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿಲ್ಲ.

ಆದುದರಿಂದ ತಾವು ಕಾಯಾರ್ಂಗದ ಮುಖ್ಯಸ್ಥರಾಗಿದ್ದು ಸಚಿವ ಕೆ.ಎಸ್.ಈಶ್ವರಪ್ಪ ಅವರ ರಾಷ್ಟ್ರದ್ರೋಹಿ ಮತ್ತು ಸಂವಿಧಾನ ವಿರೋಧಿ ಹೇಳಿಕೆಯ ಕಾರಣಕ್ಕೆ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ, ಸೂಕ್ತ ಕಾನೂನು ಕ್ರಮಕ್ಕೆ ಒಳಪಡಿಸಲು ಸರಕಾರಕ್ಕೆ ಸೂಚಿಸಬೇಕು. ಅಗತ್ಯ ಕಲಂಗಳ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ರಾಜ್ಯಪಾಲರನ್ನು ಕೋರಿದ್ದೇವೆ ಎಂದರು.

ಫೆ.8ರಂದು ಶಿವಮೊಗ್ಗದ ಬಾಪೂಜಿನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜೊಂದರ ರಾಷ್ಟ್ರಧ್ವಜ ಹಾರಿಸುವ ಧ್ವಜ ಸ್ತಂಭದಲ್ಲಿ ಕೇಸರಿ ಧ್ವಜವನ್ನು ಹಾರಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಫೆ.9ರಂದು ಸಚಿವ ಈಶ್ವರಪ್ಪ ‘ಒಂದಲ್ಲ ಒಂದು ದಿನ ದಿಲ್ಲಿ ಕೆಂಪುಕೋಟೆ ಮೇಲೆ ಕೇಸರಿ ಬಾವುಟ ಹಾರಿಸುತ್ತೇವೆ' ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದರು. ಈ ಹೇಳಿಕೆ ರಾಷ್ಟ್ರಧ್ವಜಕ್ಕೆ ಮಾಡುವ ಅವಮಾನವಾಗಿದೆ ಮತ್ತು ದೇಶದ ಸಾರ್ವಭೌಮತೆ, ಐಕ್ಯತೆ, ಅಖಂಡತೆ ವಿರುದ್ಧದ ಹೇಳಿಕೆಯಾಗಿದೆ. ಸ್ಪಷ್ಟವಾಗಿ ದೇಶದ್ರೋಹದ ಹೇಳಿಕೆಯಾಗಿದೆ' ಎಂದು ತಿಳಿಸಿದರು.

‘ರಾಷ್ಟ್ರಧ್ವಜವು ಭಾರತೀಯರ ಸ್ವಾತಂತ್ರ್ಯ ಹೋರಾಟ, ತ್ಯಾಗ, ಬಲಿದಾನ ಮತ್ತು ಹೆಮ್ಮೆಯ ಸಂಕೇತವಾಗಿದೆ. ನಮ್ಮ ಯೋಧರೂ ಮುಗಿಲೆತ್ತರಕ್ಕೆ ನಮ್ಮ ರಾಷ್ಟ್ರಧ್ವಜದ ಘನತೆಯನ್ನು ಎತ್ತಿ ಹಿಡಿಯುವುದಕ್ಕಾಗಿ ಹುತಾತ್ಮರಾಗಿದ್ದಾರೆ. ಭಾರತದ ಹೆಮ್ಮೆಯ ಮತ್ತು ಸಾರ್ವಭೌಮತೆಯ ಪ್ರತೀಕವಾದ ರಾಷ್ಟ್ರಧ್ವಜದ ಕುರಿತು ಅಗೌರವದ ಹೇಳಿಕೆ ನೀಡುವುದಾಗಲಿ, ಟೀಕೆ ಮಾಡುವುದಾಗಲಿ ಅಪರಾಧ ಎಂದು ಪರಿಗಣಿಸಲಾಗುತ್ತದೆ' ಎಂದು ತಿಳಿಸಿದರು.

‘ಹೀಗಾಗಿ ನಾವು ಬಹಳ ಗಂಭೀರವಾದ ಈ ಸಂಗತಿಯ ಬಗ್ಗೆ ವಿಧಾನಸಭೆ ಮತ್ತು ವಿಧಾನ ಪರಿಷತ್‍ನಲ್ಲಿ ಚರ್ಚಿಸಲು ನಿಲುವಳಿ ಸೂಚನೆಯನ್ನು ನೀಡಿದೆವು. ಆದರೆ, ವಿಧಾನಸಭೆಯಲ್ಲಿ ನೀಡಲಾದ ನಿಲುವಳಿ ಸೂಚನೆಯನ್ನು ಏಕಪಕ್ಷೀಯವಾಗಿ ತಿರಸ್ಕರಿಸಲಾಯಿತು. ಪರಿಷತ್‍ನಲ್ಲ್ಲಿ ಸಭಾಪತಿಯವರು ಸುಧೀರ್ಘ ಚರ್ಚೆಗೆ ಅವಕಾಶ ಕೊಟ್ಟರು. ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ಇಲ್ಲದಂತೆ ಮಾಡಿದರೆ, ಪರಿಷತ್‍ನಲ್ಲಿ ಚರ್ಚೆ ಆದರೂ ಸಚಿವರ ವಿರುದ್ಧ ಕ್ರಮ ತೆಗೆದುಕೊಳ್ಳುವಲ್ಲಿ ಸರಕಾರ ವಿಫಲವಾಯಿತು' ಎಂದು ಸಿದ್ದರಾಮಯ್ಯ ದೂರಿದರು.

‘ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪರ ಮೇಲೆ ರಾಜ್ಯ ಸರಕಾರ ಯಾವುದೇ ಕ್ರಮ ಜರುಗಿಸಲಿಲ್ಲ. ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಿಲ್ಲ. ಆದುದರಿಂದ ಈ ಹೇಳಿಕೆ ನೀಡಿರುವ ಈಶ್ವರಪ್ಪ ಮೇಲೆ ಈ ಕೂಡಲೆ ರಾಷ್ಟ್ರದ್ರೋಹದ ಪ್ರಕರಣವನ್ನು ದಾಖಲಿಸಬೇಕು ಮತ್ತು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಉಭಯ ಸದನಗಳಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದೆವು. ಆದರೂ ಸರಕಾರ ಅಥವಾ ಬಿಜೆಪಿ ಈಶ್ವರಪ್ಪ ಅವರ ವಿರುದ್ಧ ಕ್ರಮ ಜರುಗಿಸಲಿಲ್ಲ. ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲಿಲ್ಲ. ಬದಲಿಗೆ ಸಚಿವ ಈಶ್ವರಪ್ಪ ಅವರನ್ನು ಬೆಂಬಲಿಸುವ ಮಾತುಗಳನ್ನು ಆಡುತ್ತಿದ್ದಾರೆ. ಅವರನ್ನು ಬಂಧಿಸಿ ವಿಚಾರಣೆ ನಡೆಸಲು ಸಂಬಂಧಪಟ್ಟ ಪೆÇಲೀಸರಿಗೆ ಸೂಚನೆ ನೀಡಬೇಕೆಂದು ಮನವಿ ಮಾಡಿದ್ದೇವೆ ಎಂದರು.

‘ನಮ್ಮ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯ ಘನತೆ, ಗೌರವ, ಸ್ವಾಭಿಮಾನ ಕಾಪಾಡುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಲು ನೀವು ಮುಂದಾಗುತ್ತೀರಿ ಎನ್ನುವ ನಮ್ಮ ನಂಬಿಕೆಯನ್ನು ನೀವು ಸುಳ್ಳಾಗಿಸುವುದಿಲ್ಲ ಎಂದು ನಂಬಿದ್ದೇವೆ. ರಾಜ್ಯಪಾಲರಿಗೆ ಈ ಬಗ್ಗೆ ಲಿಖಿತ ಮನವಿ ಸಲ್ಲಿಸಿದ್ದೇವೆ' ಎಂದು ಸಿದ್ದರಾಮಯ್ಯ ತಿಳಿಸಿದರು.


SHARE THIS

Author:

0 التعليقات: