Monday, 28 February 2022

ನಿರ್ಬಂಧಿತ ರಷ್ಯನ್ ಹಣಕಾಸು ಸಂಸ್ಥೆಗಳ ಜತೆ ವಹಿವಾಟು ಸ್ಥಗಿತಗೊಳಿಸಿದ ಎಸ್‌ಬಿಐ


ನಿರ್ಬಂಧಿತ ರಷ್ಯನ್ ಹಣಕಾಸು ಸಂಸ್ಥೆಗಳ ಜತೆ ವಹಿವಾಟು ಸ್ಥಗಿತಗೊಳಿಸಿದ ಎಸ್‌ಬಿಐ

ಹೊಸದಿಲ್ಲಿ: ಉಕ್ರೇನ್ ಮೇಲೆ ರಷ್ಯಾ ಅತಿಕ್ರಮಣ ನಡೆಸಿದ ಬೆನ್ನಲ್ಲೇ ಅಂತರರಾಷ್ಟ್ರೀಯ ನಿರ್ಬಂಧಕ್ಕೆ ಒಳಗಾಗಿರುವ ರಷ್ಯಾದ ಹಣಕಾಸು ಸಂಸ್ಥೆಗಳನ್ನು ಒಳಗೊಂಡ ಎಲ್ಲ ವಹಿವಾಟುಗಳನ್ನು ತಡೆ ಹಿಡಿಯಲು ಭಾರತದ ಅಗ್ರಗಣ್ಯ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿರ್ಧರಿಸಿವೆ ಎಂದು ರಾಯ್ಟರ್ ವರದಿ ಮಾಡಿದೆ.

ಸಂಬಂಧಪಟ್ಟ ಗ್ರಾಹಕರಿಗೆ ಈ ಸಂಬಂಧ ಪತ್ರ ಬರೆದಿರುವ ಎಸ್‌ಬಿಐ, "ಅಮೆರಿಕ, ಯೂರೋಪಿಯನ್ ಯೂನಿಯನ್ ಅಥವಾ ವಿಶ್ವಸಂಸ್ಥೆಯ ನಿರ್ಬಂಧಕ್ಕೆ ಒಳಗಾಗಿರುವ ರಷ್ಯಾದ ಸಂಸ್ಥೆಗಳು, ಬ್ಯಾಂಕ್‌ಗಳು, ಬಂದರುಗಳು ಅಥವಾ ಹಡಗುಗಳಿಗೆ ಸಂಬಂಧಿಸಿದಂತೆ ಯಾವುದೇ ಕರೆನ್ಸಿಯಲ್ಲಿ ವಹಿವಾಟು ನಡೆಸಬಾರದು" ಎಂದು ಸೂಚಿಸಿದೆ. ಈ ಸಂಬಂಧ ಇ-ಮೇಲ್ ಪ್ರಶ್ನೆಗಳಿಗೆ ಎಸ್‌ಬಿಐ ಯಾವುದೇ ಉತ್ತರ ನೀಡಿಲ್ಲ.

"ನಾವು ದೊಡ್ಡ ಪ್ರಮಾಣದ ಅಂತರರಾಷ್ಟ್ರೀಯ ಅಸ್ತಿತ್ವ ಹೊಂದಿದ್ದೇವೆ. ಆಯಾ ಪ್ರದೇಶಗಳ ವ್ಯಾಪ್ತಿಯಲ್ಲಿ ಅಮೆರಿಕ ಹಾಗೂ ಯೂರೋಪಿಯನ್ ಯೂನಿಯನ್ ನಿರ್ಬಂಧಗಳನ್ನು ನಾವು ಅನುಸರಿಸುವುದು ಅಗತ್ಯ. ಈ ನಿಯಮಗಳಿಗೆ ನಾವು ಬದ್ಧರಾಗದೇ ಇರುವುದು ಅಸಾಧ್ಯ" ಎಂದು ಎಸ್‌ಬಿಐನ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಉಕ್ರೇನ್ ವಿರುದ್ಧದ ದಾಳಿಯನ್ನು ರಷ್ಯಾ ವಿಶೇಷ ಕಾರ್ಯಾಚರಣೆ ಎಂದು ಬಣ್ಣಿಸಿದ್ದು, ಎರಡನೇ ಮಹಾಯುದ್ಧದ ಬಳಿಕ ಯೂರೋಪಿಯನ್ ದೇಶದ ಮೇಲೆ ನಡೆಸುತ್ತಿರುವ ಅತಿದೊಡ್ಡ ದಾಳಿ ಇದಾಗಿದೆ. ರಷ್ಯಾದ ಕ್ರಮಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ರಷ್ಯಾ ವಿರುದ್ಧ ಹಲವು ನಿರ್ಬಂಧಗಳನ್ನು ಹೇರಲಾಗಿದೆ.

ರಷ್ಯಾದ ಜತೆ ನಿಕಟವಾದ ವ್ಯಾಪಾರ ಮತ್ತು ರಕ್ಷಣಾ ಸಂಬಂಧಗಳನ್ನು ಹೊಂದಿರುವ ಭಾರತ, ತನ್ನ ಧೀರ್ಘಾವಧಿಯ ಮಿತ್ರರಾಷ್ಟ್ರವಾದ ರಷ್ಯಾದ ದಾಳಿಯನ್ನು ಇದುವರೆಗೆ ಬಹಿರಂಗವಾಗಿ ಖಂಡಿಸಿಲ್ಲ. ಸಂಘರ್ಷ ನಿವಾರಣೆಗೆ ಮತ್ತು ಹಿಂಸೆ ತಡೆಯಲು ಮಾತುಕತೆಯೊಂದೇ ಮಾರ್ಗ ಎಂದು ಭಾರತ ಅಭಿಪ್ರಾಯಪಟ್ಟಿದೆ. ಆದರೆ ನಿರ್ಬಂಧಿತ ರಾಷ್ಟ್ರಗಳಿಗೆ ಸಂಬಂಧಿಸಿದ ಯಾವುದೇ ವ್ಯವಹಾರವನ್ನು ನಿರ್ವಹಿಸುವ ವಿಚಾರದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಎಸ್‌ಬಿಐ ತನ್ನ ಗ್ರಾಹಕರಿಗೆ ಸಲಹೆ ಮಾಡಿದೆ.


SHARE THIS

Author:

0 التعليقات: