Tuesday, 1 February 2022

ವಿಷಕಾರಿ ಹಾವು ಕಡಿತದಿಂದಾಗಿ ಕೇರಳದ ಉರಗತಜ್ಞ ವಾವ ಸುರೇಶ್‌ ಗಂಭೀರ: ಆಸ್ಪತ್ರೆಗೆ ದಾಖಲು


 ವಿಷಕಾರಿ ಹಾವು ಕಡಿತದಿಂದಾಗಿ ಕೇರಳದ ಉರಗತಜ್ಞ ವಾವ ಸುರೇಶ್‌ ಗಂಭೀರ: ಆಸ್ಪತ್ರೆಗೆ ದಾಖಲು

ತಿರುವನಂತಪುರಂ: ಕೇರಳದಲ್ಲಿ ಹಾವು ಹಿಡಿಯುವ ಪರಿಣತರೆಂದೇ ಖ್ಯಾತಿ ಪಡೆದ ವವ ಸುರೇಶ್ ಅವರಿಗೆ  ಜನವರಿ 31, ಸೋಮವಾರ ನಾಗರ ಹಾವೊಂದು ಕಡಿದ ಪರಿಣಾಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಾವುಗಳನ್ನು ಹಿಡಿದು ಅವುಗಳನ್ನು ರಕ್ಷಿಸುವಲ್ಲಿ ನಿಪುಣರಾದ ಸುರೇಶ್ ಅವರು ಕೊಟ್ಟಾಯಂ ಜಿಲ್ಲೆಯ ಚಂಗನಸ್ಸೇರಿ ಸಮೀಪದ ಕುರಿಚ್ಚಿ ಗ್ರಾಮದ ಮನೆಯೊಂದರಲ್ಲಿ ಹಾವನ್ನು ಹಿಡಿಯುತ್ತಿದ್ದ ಸಂದರ್ಭ ಅವರಿಗೆ ಹಾವು ಕಚ್ಚಿತ್ತು.

ಈ ಘಟನೆಯು ವೀಡಿಯೋದಲ್ಲಿ ಸೆರೆಯಾಗಿದೆ. ಸ್ಥಳೀಯ ನಿವಾಸಿಯೊಬ್ಬರು  ಸೆರೆಹಿಡಿದ ವೀಡಿಯೋದಲ್ಲಿ ಸುರೇಶ್ ಅವರು ಹಾವನ್ನು ಅದರ ಬಾಲದಲ್ಲಿ ಹಿಡಿದು ಅದನ್ನು ಗೋಣಿಚೀಲದಲ್ಲಿ ಹಾಕಲು ಯತ್ನಿಸುತ್ತಿರುವಾಗ ಅದು ಅವರ ಬಲ ಭಾಗದ ತೊಡೆಗೆ ಕಚ್ಚಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸುವ ಸಂದರ್ಭ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು ಎಂದು ಹೇಳಲಾಗಿದೆ.

ಹಾವು ಕಚ್ಚಿದ ಕೂಡಲೇ ಅವರು ಹಾವನ್ನು ತಮ್ಮ ಹಿಡಿತದಿಂದ ಸಡಿಲಿಸಿದರೂ ನೆರೆದಿದ್ದವರು ಭಯಭೀತರಾಗುತ್ತಿದ್ದಂತೆಯೇ ಅದನ್ನು ಮತ್ತೆ ಹಿಡಿದು ಗೋಣಿಚೀಲದಲ್ಲಿ ಹಾಕಿದ್ದರೆನ್ನಲಾಗಿದೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಹಾವನ್ನು ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಮೊದಲು ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದ್ದರೆ ನಂತರ ಕೊಟ್ಟಾಯಂನ ಸರಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಅವರ ಚಿಕಿತ್ಸೆಯ ವೆಚ್ಚವನ್ನು ರಾಜ್ಯ ಸರಕಾರ ಭರಿಸಲಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ಸುರೇಶ್ ಅವರು ಮಲಯಾಳಂ ವಾಹಿನಿಯೊಂದರಲ್ಲಿ `ಸ್ನೇಕ್ ಮಾಸ್ಟರ್' ಕಾರ್ಯಕ್ರಮವನ್ನೂ ನಡೆಸುತ್ತಾರೆ. ಇಲ್ಲಿಯ ತನಕ ಅವರು 38000ಕ್ಕೂ ಅಧಿಕ ಹಾವುಗಳನ್ನು ರಕ್ಷಿಸಿದ್ದರೆ 3,000ಕ್ಕೂ ಹೆಚ್ಚು ಹಾವುಗಳು ಅವರಿಗೆ ಕಚ್ಚಿವೆ. ಫೆಬ್ರವರಿ 2020ರಲ್ಲೂ ಒಮ್ಮೆ ಅವರಿಗೆ ಹಾವು ಹಿಡಿಯುವ ವೇಳೆ ಅದು ಕಡಿದ ಪರಿಣಾಮ ಆಸ್ಪತ್ರೆಗೆ ದಾಖಲಿಸಲಾಗಿತ್ತು.


SHARE THIS

Author:

0 التعليقات: