ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವ ಭಂಡ ಧೈರ್ಯ ಬೇಡ: ಮಂಗಳೂರು ಕಮಿಷನರ್ ಶಶಿಕುಮಾರ್
ಮಂಗಳೂರು: ಫೇಸ್ಬುಕ್, ವಾಟ್ಸಾಪ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವ ಭಂಡ ಧೈರ್ಯ ಬೇಡ. ಸುಳ್ಳು ಸುದ್ದಿ ಹರಡಿ ಶಾಂತಿ ಕದಡಲು ಪ್ರಯತ್ನಿಸುವ ಸಮಾಜಘಾತುಕರ ಮೇಲೆ ಪೊಲೀಸರು ನಿಗಾ ವಹಿಸಿದ್ದಾರೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರ ಜತೆ ಮಾತನಾಡುತ್ತಾ ಈ ಎಚ್ಚರಿಕೆ ನೀಡಿದ ಅವರು, ಶಿವಮೊಗ್ಗದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಜರಂಗದಳದ ಕಾರ್ಯಕರ್ತ ಹರ್ಷ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದರ ವಿರುದ್ಧ ಈಗಾಗಲೇ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದರು.
ಮಂಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಮಂಗಳೂರು ಮುಸ್ಲಿಂ ಹೆಸರಿನ ಫೇಸ್ಬುಕ್ ಪೇಜ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಫೇಸ್ಬುಕ್ನಲ್ಲಿರುವರ ಬಗ್ಗೆ ಮಾಹಿತಿಯನ್ನು ಕಲೆ ಹಾಕುವ ಕಾರ್ಯ ನಡೆಯುತ್ತಿದೆ ಎಂದು ಅವರು ಹೇಳಿದರು.
ಸಾಮಾಜಿಕ ಜಾಲತಾಣಗಳ ಮೂಲಕ ಕೋಮುಭಾವನೆ ಸೃಷ್ಟಿಸಿ, ಜಾತಿ ಧರ್ಮಗಳ ನಡುವೆ ಸಂಘರ್ಷಕ್ಕೆ ಎಡೆ ಮಡಿಕೊಡುವ ಎಲ್ಲಾ ಪೊಸ್ಟ್ಗಳ ಮೇಲೆ ನಿಗಾ ವಹಿಸಲಾಗುತ್ತಿದೆ. ಇಂತಹ ಪೋಸ್ಟ್ಗಳನ್ನು ಲೈಕ್, ಶೇರ್, ಫಾರ್ವಡ್ ಹಾಗೂಆಕ್ಷೇಪಾರ್ಹವಾಗಿ ಕಮೆಂಟ್ ಮಾಡುವವರ ವಿರುದ್ಧವೂ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ವಿದ್ಯಾರ್ಥಿ, ಕಾರ್ಮಿಕರು, ಮಹಿಳೆಯರು, ರಾಜಕೀಯ ಪಕ್ಷದ ನಾಯಕರು, ಕೆಲವೊಂದು ವ್ಯಕ್ತಿಗಳು ಸೇರಿದಂತೆ ಎಲ್ಲಾ ಸ್ಥರದ ಸಾಮಾಜಿಕ ಜಾಲತಾಣಗಳ ಗುಂಪುಗಳ ಮೇಲೂ ಪೊಲೀಸ್ ಸೈಬರ್ ಘಟಕ ನಿಗಾ ವಹಿಸಿದೆ. ಅಲ್ಲಿ ಹರಿದಾಡುವ ಆಕ್ಷೇಪಾರ್ಹ ಪೋಸ್ಟ್ಗಳನ್ನು ಅತ್ಯಂತ ಹತ್ತಿರದಿಂದ ಪರಿಶೀಲಿಸುತ್ತಿದೆ. ಇದಕ್ಕಾಗಿ ಈಗಾಗಲೇ ಪೊಲೀಸ್ ಆಯುಕ್ತರ ಕಚೇರಿ ಕಟ್ಟಡದಲ್ಲಿಯೇ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಆರು ಮಂದಿ ತಜ್ಞರು, ತಾಂತ್ರಿಕ ಸಿಬ್ಬಂದಿಯನ್ನು ಒಳಗೊಂಡ ಸುಸಜ್ಜಿತ ವಿಭಾಗವನ್ನು ಆರಂಭಿಸಲಾಗಿದೆ. ಇದು ರಾಜ್ಯ ಗುಪ್ತಚರ ಇಲಾಖೆಯ ಜತೆಗೂ ಸಮನ್ವಯದಿಂದ ಕಾರ್ಯಾರಂಭಿಸಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಈ ಸಂದರ್ಭ ಡಿಸಿಪಿಗಳಾದ ಹರಿರಾಂ ಶಂಕರ್, ದಿನೇಶ್ ಕುಮಾರ್ ಉಪಸ್ಥಿತರಿದ್ದರು.
ಪ್ರವಾದಿ ನಿಂದನೆ ಮಾಡಿದವರನ್ನು ಎಂದಿಗೂ ಬಿಡುವುದಿಲ್ಲ ಸೇರಿದಂತೆ ಆಕ್ಷೇಪಾರ್ಹ ಹೇಳಿಕೆಗಳನ್ನು ಹೊಂದಿರುವ ಈ ಮಂಗಳೂರು ಮುಸ್ಲಿಮ್ಸ್ ಎಂಬ ಫೇಸ್ಬುಕ್ ಪೇಜ್ನಲ್ಲಿ ಖಾಸಗಿ ಸುದ್ದಿವಾಹಿನಿಯೊಂದರ ಮುಖ್ಯಸ್ಥರಿಗೂ ಎಚ್ಚರಿಕೆ ನೀಡಲಾಗಿದೆ.
ಸಂಘಟನೆ, ವ್ಯಕ್ತಿಗಳು ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ 1064 ವಿವಿಧ ವ್ಯಕ್ತಿ, ಗುಂಪುಗಳ ಮೇಲೆ ಕಠಿಣ ನಿಗಾ ಇರಿಸಲಾಗಿದೆ. ಆನ್ಲೈನ್ ಮಾಧ್ಯಮ, ವೆಬ್ ಪೇಜ್, ಮುದ್ರಣ ಮಾಧ್ಯಮ ಮೇಲೂ ನಿಗಾ ವಹಿಸಲಾಗಿದೆ. ಈ ಹಿಂದಿನ ಸೈಬರ್ ಅಪರಾಧಿಗಳು, ದ್ವೇಷ ಭಾಷಣ, ಅಕ್ಷೇಪಾರ್ಹ ಹೇಳಿಕೆಗಳನ್ನು ನೀಡುವವರ ಮಾಹಿತಿಯನ್ನೂ ಕಲೆ ಹಾಕಲಾಗುತ್ತಿದೆ. ಪ್ರತಿ ಠಾಣಾ ವ್ಯಾಪ್ತಿಯಲ್ಲಿ 10 ಬ್ಲಾಕ್ಸ್ಪಾಟ್ಗಳನ್ನು ಗುರುತಿಸಲಾಗುತ್ತಿದೆ. ಕ್ಷಿಪ್ರ ಮಾಹಿತಿ ಒದಗಿಸುವಲ್ಲಿ ಸಾಮಾಜಿಕ ಜಾಲತಾಣ ಅತ್ಯಂತ ಶಕ್ತಿಯುತ ತಾಣವಾಗಿದ್ದು, ಅದರ ಸದ್ಬಳಕೆ ಮಾಡಬೇಕು. ಅದನ್ನು ಬಿಟ್ಟು ಶಾಂತಿಯಿಂದ ಕೂಡಿದ ನಗರದಲ್ಲಿ ಕೋಮು ದ್ವೇಷ ಹರಡುವ ಪ್ರಯತ್ನ ಮಾಡಿದರೆ ಕಠಿಣ ಕ್ರಮ ವಹಿಸಲಾಗುವುದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಎಚ್ಚರಿಸಿದರು.
0 التعليقات: