ಫಿಫಾ ವಿಶ್ವಕಪ್ನಿಂದ ರಷ್ಯಾ ಉಚ್ಚಾಟನೆ: ಫಿಫಾ, ಯುಇಎಫ್ಎ ಜಂಟಿ ಹೇಳಿಕೆ
ಪ್ಯಾರೀಸ್: ಉಕ್ರೇನ್ ಮೇಲಿನ ದಾಳಿಯನ್ನು ಖಂಡಿಸಿ 2022ರ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯಿಂದ ರಷ್ಯಾವನ್ನು ಉಚ್ಚಾಟಿಸಲಾಗಿದ್ದು, ರಷ್ಯಾದ ಎಲ್ಲ ಕ್ಲಬ್ ತಂಡಗಳನ್ನು ಅಂತರರಾಷ್ಟ್ರೀಯ ಫುಟ್ಬಾಲ್ ಸ್ಪರ್ಧೆಗಳಿಂದ ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ ಎಂದು ಫಿಫಾ ಹಾಗೂ ಯುಇಎಫ್ಎ ಜಂಟಿ ಹೇಳಿಕೆ ನೀಡಿವೆ.
ಈ ವರ್ಷ ಕತರ್ನಲ್ಲಿ ನಡೆಯುವ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗಾಗಿ ಮಾರ್ಚ್ನಲ್ಲಿ ಅರ್ಹತಾ ಪ್ಲೇ ಆಫ್ ಪಂದ್ಯಗಳನ್ನು ರಷ್ಯಾ ಪುರುಷರ ಫುಟ್ಬಾಲ್ ತಂಡ ಆಡಬೇಕಿತ್ತು. ಅಂತೆಯೇ ರಷ್ಯಾದ ಮಹಿಳಾ ತಂಡ ಇಂಗ್ಲೆಂಡ್ನಲ್ಲಿ ಈ ವರ್ಷದ ಜುಲೈನಲ್ಲಿ ನಡೆಯಬೇಕಿದ್ದ ಯೂರೋಪಿಯನ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಬೇಕಿತ್ತು. ಈ ಹೊಸ ಆದೇಶ ಯುರೋಪಿಯನ್ ಸ್ಪರ್ಧೆಗಳಲ್ಲಿ ಭಾಗವಹಿಸುವ ರಷ್ಯಾದ ಫುಟ್ಬಾಲ್ ಕ್ಲಬ್ಗಳ ಮೇಲೂ ಪರಿಣಾಮ ಬೀರಲಿದೆ.
ಫಿಫಾ ಹಾಗೂ ಯುಇಎಫ್ಎ ಜಂಟಿಯಾಗಿ ನಿರ್ಧರಿಸಿ, ಎಲ್ಲ ರಷ್ಯನ್ ತಂಡಗಳು ಅಂದರೆ ರಾಷ್ಟ್ರೀಯ ಪ್ರತಿನಿಧಿತ್ವದ ತಂಡಗಳು ಮತ್ತು ಕ್ಲಬ್ ತಂಡಗಳನ್ನು ಫಿಫಾ ಹಾಗೂ ಯುಇಎಫ್ಎ ಸ್ಪರ್ಧೆಗಳಿಂದ ಮುಂದಿನ ನೋಟಿಸ್ ನೀಡುವವರೆಗೆ ನಿಷೇಧಿಸಲಾಗಿದೆ ಎಂದು ಉಭಯ ಸಂಸ್ಥೆಗಳು ಜಂಟಿ ಹೇಳಿಕೆಯಲ್ಲಿ ವಿವರಿಸಿವೆ.
ಮಾರ್ಚ್ 24ರಂದು ನಡೆಯಬೇಕಿದ್ದ ವಿಶ್ವಕಪ್ ಅರ್ಹತಾ ಪ್ಲೇಆಫ್ ಸೆಮಿಫೈನಲ್ನಲ್ಲಿ ರಷ್ಯಾ, ಪೋಲಂಡ್ ವಿರುದ್ಧ ಸೆಣೆಸಬೇಕಿತ್ತು. ಜತೆಗೆ ಫೈನಲ್ನಲ್ಲಿ ಸ್ಥಾನ ಪಡೆಯಲು ಸ್ವೀಡನ್ ಅಥವಾ ಜೆಕ್ ಗಣರಾಜ್ಯವನ್ನು ಮಾರ್ಚ್ 29ರಂದು ಎದುರಿಸಬೇಕಿತ್ತು. ಆದರೆ ಮೂರೂ ಸಂಭಾವ್ಯ ಎದುರಾಳಿಗಳು ಎಲ್ಲ ಪಂದ್ಯಗಳನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದವು.
0 التعليقات: