Saturday, 12 February 2022

 ಬೆಂಗಳೂರು: ಐಪಿಎಲ್-2022ರ ಮೆಗಾ ಹರಾಜು ಬೆಂಗಳೂರಿನಲ್ಲಿ ಶನಿವಾರ ಆರಂಭವಾಗಿದ್ದು,2 ಕೋಟಿ ರೂ. ಮೂಲ ಬೆಲೆ ಹೊಂದಿದ್ದ  ಭಾರತೀಯ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರನ್ನು 12.25 ಕೋಟಿ ರೂ.ಗೆ ಕೋಲ್ಕತ್ತಾ ನೈಟ್ ರೈಡರ್ಸ್‌ ಖರೀದಿಸಿದೆ.

ಐಪಿಎಲ್ ಹರಾಜು ಮಧ್ಯಾಹ್ನ 3:30ಕ್ಕೆ ಪುನರಾರಂಭ

ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ಸ್ಥಗಿತಗೊಂಡಿರುವ  ಐಪಿಎಲ್ 2022 ರ ಹರಾಜು ಪ್ರಕ್ರಿಯೆ ಮಧ್ಯಾಹ್ನ 3:30 ಕ್ಕೆ ಪುನರಾರಂಭವಾಗಲಿದೆ ಎಂದು ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್ ತಿಳಿಸಿದೆ.

ಹರಾಜುದಾರ ಹ್ಯೂ ಎಡ್ಮೀಡ್ಸ್ ವೇದಿಕೆಯ ಮೇಲೆ ಕುಸಿದು ಬಿದ್ದ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಐಪಿಎಲ್ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಕುಸಿದು ಬಿದ್ದ ಹರಾಜುಗಾರ ಎಡ್ಮೀಡ್ಸ್: ಐಪಿಎಲ್ 2022 ಹರಾಜು ಸ್ಥಗಿತ

ಹರಾಜುಗಾರ ಹ್ಯೂ ಎಡ್ಮೀಡ್ಸ್ ಈವೆಂಟ್‌ನ ಮಧ್ಯದಲ್ಲಿ ಕುಸಿದುಬಿದ್ದ ನಂತರ ಐಪಿಎಲ್ 2022 ಹರಾಜು ಸ್ಥಗಿತಗೊಂಡಿದೆ. ಘಟನೆ ನಡೆದಾಗ ಶ್ರೀಲಂಕಾ ಆಲ್‌ರೌಂಡರ್ ವನಿಂದು ಹಸರಂಗ ಅವರ ಹರಾಜು ಪ್ರಕ್ರಿಯೆ ನಡೆಯುತ್ತಿತ್ತು.

ಹರ್ಷಲ್ ಪಟೇಲ್‌  ರನ್ನು ಮತ್ತೆ ಖರೀದಿಸಿದ ಆರ್ ಸಿಬಿ

2 ಕೋಟಿ ರೂ. ಮೂಲ ಬೆಲೆ ಹೊಂದಿದ್ದ ಹರ್ಷಲ್ ಪಟೇಲ್  ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು  10.75 ಕೋಟಿ ರೂ. ಗೆ ಖರೀದಿಸಿದೆ. ಕಳೆದ ಋತುವಿನ 'ಪರ್ಪಲ್ ಕ್ಯಾಪ್'  ಧರಿಸಿದ್ದ ಪಟೇಲ್ ಅವರನ್ನು  ಮರಳಿ ಖರೀದಿಸಲು ರಾಜಸ್ಥಾನ ರಾಯಲ್ಸ್ ಜೊತೆಗಿನ ಬಿಡ್ಡಿಂಗ್ ಯುದ್ಧದಲ್ಲಿ ಆರ್ ಸಿಬಿ ಗೆಲುವಿನ ನಗೆ ಬೀರಿದೆ.

ಲಕ್ನೋ ತಂಡ ಸೇರಿದ ದೀಪಕ್ ಹೂಡಾ

ಭಾರತದ ಆಲ್ ರೌಂಡರ್ ದೀಪಕ್ ಹೂಡಾ (ಮೂಲ ಬೆಲೆ 75 ಲಕ್ಷ ರೂ.)ಅವರನ್ನು ಲಕ್ನೋ ಸೂಪರ್ ಜೈಂಟ್ಸ್ 5.75 ಕೋಟಿ ರೂ.ಗೆ ತನ್ನದಾಗಿಸಿಕೊಂಡಿತು.

8.75 ಕೋ. ರೂ.ಗೆ  ಲಕ್ನೊ ಪಾಲಾದ ವೆಸ್ಟ್ ಇಂಡೀಸ್ ಆಲ್ ರೌಂಡರ್ ಜೇಸನ್ ಹೋಲ್ಡರ್

1.5 ಕೋಟಿ ರೂ ಮೂಲ ಬೆಲೆ ಹೊಂದಿದ್ದ ವೆಸ್ಟ್ ಇಂಡೀಸ್ ಆಲ್ ರೌಂಡರ್ ಜೇಸನ್ ಹೋಲ್ಡರ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ 8.75 ಕೋ.ರೂ. ಗೆ ಖರೀದಿಸಿದೆ. ಲಕ್ನೊ ತಂಡವು  ರಾಜಸ್ಥಾನ ರಾಯಲ್ಸ್ ಜೊತೆಗಿನ ಬಿಡ್ಡಿಂಗ್ ವಾರ್ ನಲ್ಲಿ ಜಯ ಸಾಧಿಸಿತು.

ಶಾಕೀಬ್ ಅಲ್ ಹಸನ್ ಅನ್ ಸೋಲ್ಡ್

ಬಾಂಗ್ಲಾದೇಶದ ಲೆಜೆಂಡರಿ ಆಲ್‌ರೌಂಡರ್ ಶಾಕೀಬ್ ಅಲ್ ಹಸನ್(ಮೂಲ ಬೆಲೆ 2 ಕೋಟಿ ರೂ.)ಮಾರಾಟವಾಗದೆ ಉಳಿದಿದ್ದಾರೆ.

ಮತ್ತೆ ಚೆನ್ನೈ ಕಿಂಗ್ಸ್ ತೆಕ್ಕೆಗೆ ಡ್ವೇನ್ ಬ್ರಾವೊ

ವೆಸ್ಟ್ ಇಂಡೀಸ್ ಆಲ್‌ರೌಂಡರ್ ಐಪಿಎಲ್ 2022 ರಲ್ಲಿ ಮತ್ತೆ ಹಳದಿ ಜೆರ್ಸಿಯನ್ನು ಧರಿಸಲಿದ್ದಾರೆ. ಬ್ರಾವೊ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ ಕೆ) 4.40 ಕೋಟಿ ರೂ.ಗೆ ಮತ್ತೊಮ್ಮೆ ಖರೀದಿಸಿತು.

ಕೆಕೆಆರ್‌ಗೆ ಮರಳಿದ ನಿತೀಶ್ ರಾಣಾ

ಭಾರತದ ಬ್ಯಾಟರ್ ನಿತೀಶ್ ರಾಣಾ (ಮೂಲ ಬೆಲೆ 1 ಕೋಟಿ ರೂ.) ಕೋಲ್ಕತ್ತಾ ನೈಟ್ ರೈಡರ್ಸ್ ಗೆ 8 ಕೋಟಿ ರೂ.ಗೆ ಸೇಲ್ ಆದರು. ಮುಂಬೈ ಇಂಡಿಯನ್ಸ್ ಹಾಗೂ  ಲಕ್ನೋ ಸೂಪರ್ ಜೈಂಟ್ಸ್ ರೇಸ್‌ನಲ್ಲಿದ್ದವು.  ಆದರೆ ಕೆಕೆಆರ್ ತಂಡವು  ಎಡಗೈ ಆಟಗಾರನನ್ನು ಮರಳಿ ಪಡೆಯಲು ನಿರ್ಧರಿಸಿತು.

ಮಾರಾಟವಾಗದೆ ಉಳಿದ ಸುರೇಶ್ ರೈನಾ!

ಐಪಿಎಲ್‌ನ ದಿಗ್ಗಜರಲ್ಲಿ ಒಬ್ಬರಾದ ಭಾರತದ ಮಾಜಿ ಬ್ಯಾಟರ್ ಸುರೇಶ್ ರೈನಾ, ಮಾರಾಟವಾಗದೆ ಉಳಿದಿದ್ದಾರೆ. ರೈನಾ ಅವರ ಮೂಲ ಬೆಲೆ 2 ಕೋಟಿ ರೂ.

*ಡೇವಿಡ್ ಮಿಲ್ಲರ್ , ಸ್ಮಿತ್ ಅನ್‌ಸೋಲ್ಡ್

ದಕ್ಷಿಣ ಆಫ್ರಿಕಾದ ಬ್ಯಾಟರ್ ಡೇವಿಡ್ ಮಿಲ್ಲರ್ ಹಾಗೂ ಆಸ್ಟ್ರೇಲಿಯದ ಸ್ಟೀವನ್ ಸ್ಮಿತ್  ಕೂಡ  ಐಪಿಎಲ್ 2022 ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದಾರೆ.

ಗುಜರಾತ್ ಟೈಟಾನ್ಸ್ ಪಾಲಾದ ಜೇಸನ್ ರಾಯ್

ಗುಜರಾತ್ ಟೈಟಾನ್ಸ್ ಇಂಗ್ಲೆಂಡ್ ಬ್ಯಾಟರ್ ಜೇಸನ್ ರಾಯ್ ಅವರನ್ನು ಅವರ ಮೂಲ ಬೆಲೆ 2 ಕೋಟಿ ರೂ.ಗೆ ಖರೀದಿಸಿದೆ.  ರಾಯ್ ಟ್ವೆಂಟಿ-20 ಮಾದರಿ ಕ್ರಿಕೆಟ್ ನಲ್ಲಿ ಸದ್ಯ ಭರ್ಜರಿ ಫಾರ್ಮ್ ನಲ್ಲಿದ್ದಾರೆ.

ರಾಜಸ್ಥಾನ ರಾಯಲ್ಸ್‌ ತೆಕ್ಕೆಗೆ ಕನ್ನಡಿಗ ದೇವದತ್ ಪಡಿಕ್ಕಲ್

 ಭಾರತದ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ (ಮೂಲ ಬೆಲೆ 2 ಕೋಟಿ ರೂ.) ರಾಜಸ್ಥಾನ ರಾಯಲ್ಸ್‌ಗೆ 7.75 ಕೋಟಿ ರೂ.ಗೆ ಹರಾಜಾದರು.

2 ಕೋ.ರೂ.ಗೆ ಸಿಎಸ್‌ಕೆ ಸೇರಿದ ರಾಬಿನ್ ಉತ್ತಪ್ಪ

ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕನ್ನಡಿಗ ರಾಬಿನ್ ಉತ್ತಪ್ಪ ಅವರನ್ನು ಅವರ ಮೂಲ ಬೆಲೆ 2 ಕೋಟಿ ರೂ.ಗೆ ಖರೀದಿಸಿದೆ.

ಲಕ್ನೋ ಸೂಪರ್ ಜೈಂಟ್ಸ್‌ಗೆ ಮನೀಶ್ ಪಾಂಡೆ

1 ಕೋಟಿ ಮೂಲ ಬೆಲೆ ಹೊಂದಿದ್ದ  ಕನ್ನಡಿಗ  ಮನೀಶ್ ಪಾಂಡೆ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ 4.60 ಕೋಟಿ ರೂ.ಗೆ ತನ್ನದಾಗಿಸಿಕೊಂಡಿದೆ. ಮನೀಶ್ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ಗೆ ಡೇವಿಡ್ ವಾರ್ನರ್ ಸೋಲ್ಡ್

ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಜಿ ನಾಯಕ ಡೇವಿಡ್ ವಾರ್ನರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 6.25 ಕೋಟಿ ರೂ.ಗೆ ಖರೀದಿಸಿದೆ. ವಾರ್ನರ್  ಮೂಲ ಬೆಲೆ 2 ಕೋಟಿ ರೂ.

ದಕ್ಷಿಣ ಆಫ್ರಿಕಾದ ವಿಕೆಟ್‌ಕೀಪರ್-ಬ್ಯಾಟರ್ ಕ್ವಿಂಟನ್ ಡಿ ಕಾಕ್ (ರೂ 2 ಕೋಟಿ ಮೂಲ ಬೆಲೆ) ರೂ 6.75 ಕೋಟಿಗೆ ಲಕ್ನೋ ಸೂಪರ್ ಜೈಂಟ್ಸ್‌ ಪಾಲಾದರು.

ಆರ್ ಸಿಬಿ ಪಾಲಾದ ಎಫ್ ಡು ಪ್ಲೆಸಿಸ್

ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಫ್ ಡು ಪ್ಲೆಸಿಸ್ (ಮೂಲ ಬೆಲೆ 2 ಕೋಟಿ ರೂ.) ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ)ಗೆ 7 ಕೋಟಿ ರೂ.ಗೆ ಮಾರಾಟವಾಗಿದ್ದಾರೆ.

ಭಾರತದ ವೇಗಿ ಮುಹಮ್ಮದ್ ಶಮಿ (ಮೂಲ ಬೆಲೆ 2 ಕೋಟಿ ರೂ.) ಗುಜರಾತ್ ಟೈಟಾನ್ಸ್‌ಗೆ 6.25 ಕೋಟಿ ರೂ.ಹರಾಜಾದರು.

ನ್ಯೂಝಿಲ್ಯಾಂಡ್  ವೇಗದ ಬೌಲರ್  ಟ್ರೆಂಟ್ ಬೌಲ್ಟ್ (ಮೂಲ ಬೆಲೆ 2 ಕೋಟಿ ರೂ.) ರಾಜಸ್ಥಾನ ರಾಯಲ್ಸ್ ತಂಡಕ್ಕೆ 8 ಕೋಟಿ ರೂ.ಗೆ ಹರಾಜಾದರು.

 ಭಾರತದ ಆರಂಭಿಕ ಬ್ಯಾಟರ್ ಶಿಖರ್ ಧವನ್ 8.25 ಕೋ.ರೂ.ಗೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ.  

ಪ್ರಮುಖ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಧವನ್ ರನ್ನು ತೆಕ್ಕೆಗೆ ತೆಗೆದುಕೊಳ್ಳಲು ದಿಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ ರಾಯಲ್ಸ್ ಬಿಡ್ ಸಲ್ಲಿಸಿದ್ದವು.  ಪಂಜಾಬ್ ಕಿಂಗ್ಸ್ ಅಂತಿಮವಾಗಿ ಬಿಡ್ ಗೆದ್ದುಕೊಂಡಿತು.

ಧವನ್ 2 ಕೋ.ರೂ. ಮೂಲ ಬೆಲೆ ಹೊಂದಿದ್ದರು.

 ರಾಜಸ್ಥಾನ್ ರಾಯಲ್ಸ್  ತೆಕ್ಕೆಗೆ ಆರ್.ಅಶ್ವಿನ್

ಮೂಲ ಬೆಲೆ 2 ಕೋಟಿ ರೂ. ಹೊಂದಿದ್ದ ಭಾರತದ ಆಫ್-ಸ್ಪಿನ್ನರ್ ರವಿಚಂದ್ರನ್ ರಾಜಸ್ಥಾನ್ ರಾಯಲ್ಸ್ ಗೆ 5 ಕೋಟಿ ರೂ.ಗೆ ಮಾರಾಟವಾದರು.

*ಮೂಲ ಬೆಲೆ 2 ಕೋಟಿ ರೂ. ಹೊಂದಿದ್ದ ಆಸ್ಟ್ರೇಲಿಯಾದ ಆಲ್ ರೌಂಡರ್ ಪ್ಯಾಟ್ ಕಮಿನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ಗೆ 7.25 ಕೋಟಿ ರೂ.ಗೆ ಹರಾಜಾದರು.

* ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಾಗಿಸೊ ರಬಾಡ ಪಂಜಾಬ್ ಕಿಂಗ್ಸ್‌ಗೆ 9.25 ಕೋಟಿ ರೂ.ಗೆ ಹರಾಜಾದರು.


SHARE THIS

Author:

0 التعليقات: