Saturday, 19 February 2022

ಬ್ರೆಝಿಲ್‌ನಲ್ಲಿ ಭೀಕರ ಪ್ರವಾಹ: 146 ಮಂದಿ ಮೃತ್ಯು


ಬ್ರೆಝಿಲ್‌ನಲ್ಲಿ ಭೀಕರ ಪ್ರವಾಹ: 146 ಮಂದಿ ಮೃತ್ಯು

ಪೆಟ್ರೊಪೊಲಿಸ್: ಭೀಕರ ಪ್ರವಾಹದಿಂದ ಕಂಗೆಟ್ಟಿರುವ ಬ್ರೆಝಿಲ್‌ನಲ್ಲಿ ಅವಶೇಷಗಳಡಿ ಸಿಕ್ಕಿಹಾಕಿಕೊಂಡಿದ್ದ ಮತ್ತಷ್ಟು ಮೃತದೇಹಗಳನ್ನು ರಕ್ಷಣಾ ಕಾರ್ಯಕರ್ತರು ಹೊರಕ್ಕೆ ತೆಗೆದಿದ್ದು, ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 146ಕ್ಕೇರಿದೆ. 26 ಮಕ್ಕಳು ಕೂಡಾ ಜೀವ ಕಳೆದುಕೊಂಡಿದ್ದಾರೆ.

ದಟ್ಟ ಮಂಜು ಮತ್ತು ಮೈಕೊರೆಯುವ ಚಳಿಯ ನಡುವೆಯೂ ಪರಿಹಾರ ಕಾರ್ಯಕರ್ತರು, ಅವಶೇಷಗಳಡಿ ಸಿಲುಕಿದವರ ರಕ್ಷಣೆಗೆ ಸಮರೋಪಾದಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಐದು ದಿನಗಳಿಂದ ಅವಶೇಷಗಳಡಿ ಸಿಲುಕಿಕೊಂಡಿರುವವರು ಬದುಕಿ ಉಳಿದಿರುವ ಸಾಧ್ಯತೆ ಕ್ಷೀಣ ಎನ್ನಲಾಗಿದೆ. ಆಲ್ಟೋ ಡಾ ಸೆರ್ರಾದಲ್ಲಿ ರಕ್ಷಣಾ ಕಾರ್ಯಕರ್ತರು ಎರಡು ಮೃತದೇಹಗಳನ್ನು ಚೀಲದಲ್ಲಿ ಹೊತ್ತು ತರುತ್ತಿರುವುದನ್ನು ಎಎಫ್‌ಪಿ ಛಾಯಾಗ್ರಾಹಕರು ನೋಡಿದ್ದಾರೆ.

ವಿಕೋಪಕ್ಕೆ ತುತ್ತಾಗಿರುವ ಪ್ರದೇಶಗಲ್ಲಿ ಪರಿಹಾರ ಕಾರ್ಯಕರ್ತರು ಸೀಟಿ ಊದುವ ಮೂಲಕ ನಿಶಬ್ದರಾಗುವಂತೆ ಮನವಿ ಮಾಡುತ್ತಿದ್ದು ಹಾಗೂ ಬದುಕಿ ಉಳಿದವರಿಂದ ಯಾವುದೇ ಸಂಕೇತಗಳು ಬರುತ್ತಿವೆಯೇ ಎಂದು ಪರಿಶೀಲಿಸುತ್ತಿದ್ದಾರೆ. ಆದರೆ ಮಂಗಳವಾರದ ಧಾರಾಕಾರ ಮಳೆಯ ವಿಕೋಪಕ್ಕೆ ಸಿಲುಕಿರುವ ಜನ ಬದುಕಿ ಉಳಿದಿರುವ ಸಾಧ್ಯತೆ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಧಾರಾಕಾರ ಮಳೆಯಿಂದಾಗಿ ರಸ್ತೆಗಳು ಕೂಡಾ ನದಿಗಳಾಗಿ ಮಾರ್ಪಟ್ಟು, ಸುಂದರ ಪರ್ವತ ನಗರಗದಲ್ಲಿ ಹಲವು ಕಡೆ ಭಾರಿ ಭೂಕುಸಿತಗಳು ಸಂಭವಿಸಿ ಜನರಿಗೆ ಹೊರಬರಲು ದಾರಿಯೇ ಇಲ್ಲದ ಪರಿಸ್ಥಿತಿ ನಿರ್ಮಾಣಾಗಿದೆ. 24 ಮಂದಿಯನ್ನು ಜೀವಂತ ರಕ್ಷಿಸಲಾಗಿದೆ. ಈ ಪೈಕಿ ಬಹುತೇಕ ದುರಂತ ಸಂಭವಿಸಿದ ಆರಂಭಿಕ ಗಂಟೆಗಳಲ್ಲಿ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ರಿಯೊ ಡೆ ಜನೈರೊ ಪೊಲೀಸರ ಪ್ರಕಾರ ಇನ್ನೂ 218 ಮಂದಿ ನಾಪತ್ತೆಯಾಗಿದ್ದಾರೆ. ಮೃತಪಟ್ಟ 146 ಮಂದಿಯ ಪೈಕಿ 91 ಮಂದಿಯ ಗುರುತು ಪತ್ತೆ ಮಾಡಲಾಗಿದೆ.SHARE THIS

Author:

0 التعليقات: