ನ್ಯಾಯಾಲಯ ಆವರಣದಲ್ಲಿ ಗಲಾಟೆ ಪ್ರಕರಣ: ವಕೀಲ ಜಗದೀಶ್ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ
ಬೆಂಗಳೂರು: ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದ ಆವರಣದೊಳಗೆ ನಡೆದ ಗಲಾಟೆ ಪ್ರಕರಣ ಸಂಬಂಧ ಬಂಧಿತರಾಗಿರುವ ನ್ಯಾಯವಾದಿ ಜಗದೀಶ್ ಕೆ.ಎನ್.ಮಹದೇವ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜಗದೀಶ್ ಅವರ ವಿರುದ್ಧ ಬೆಂಗಳೂರು ವಕೀಲರ ಸಂಘದ ಪ್ರಮುಖರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ವಕೀಲರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ವೃತ್ತಿಗೆ ಚ್ಯುತಿ ಬರುವ ರೀತಿಯಲ್ಲಿ ಜಗದೀಶ್ ನಡೆದುಕೊಂಡಿದ್ದಾರೆ. ಗಲಾಟೆ ಮಾಡಿ ನ್ಯಾಯಾಲಯದ ಆವರಣದಲ್ಲಿ ಅಶಾಂತಿ ವಾತಾವರಣ ನಿರ್ಮಿಸಿದ್ದರೆಂದು ದೂರಿದ್ದರು.
ಈ ಸಂಬಂಧ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರ ಸೂಚನೆಯಂತೆ ವಕೀಲರನ್ನು ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ.
ದೂರು-ಪ್ರತಿ ದೂರು?: ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಅವರು ಜಗದೀಶ್ ವಿರುದ್ದ ವಕೀಲರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆಂದು ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇನ್ನೂ, ವಿವೇಕ್ ರೆಡ್ಡಿ ದೂರು ನೀಡುವು ಮುನ್ನವೇ ವಕೀಲ ಜಗದೀಶ್ ಪ್ರತಿದೂರು ದಾಖಲಿಸಿದ್ದರು.
ಕೆಲವರು ತನ್ನ ಮೇಲೆ ಹಾಗೂ ನನ್ನ ಪುತ್ರ ಸೇರಿದಂತೆ ಆಪ್ತರ ಮೇಲೆ ಹಲ್ಲೆ ನಡೆಸಿದ್ದಾರೆಂದು ಜಗದೀಶ್ ಆರೋಪಿಸಿದ್ದರು. ಇದಾದ ನಂತರ ಶನಿವಾರ ವಕೀಲರ ಸಂಘ ಪೊಲೀಸ್ ಆಯುಕ್ತರಿಗೆ ದೂರು ನೀಡಿತ್ತು.
ಪುತ್ರನ ಮೇಲೆ ಹಲ್ಲೆ: ಎಫ್ಐಆರ್; ನ್ಯಾಯಾಲಯದ ಆವರಣದಲ್ಲೇ ಜಗದೀಶ್ ಅವರ ಮಗ ಹಾಗೂ ಇತರರ ಮೇಲೆ ಹಲ್ಲೆ ನಡೆದಿದ್ದು, ಈ ಬಗ್ಗೆಯೂ ಹಲಸೂರು ಗೇಟ್ ಠಾಣೆಯಲ್ಲಿ ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ.
ಎಫ್ಐಆರ್ ದಾಖಲು: ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ವಕೀಲ ಜಗದೀಶ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಐಪಿಸಿ 307,143,153ಎ,120ಬಿ, 323, 504, 506,149 ಸೆಕ್ಷನ್ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
0 التعليقات: