Wednesday, 5 January 2022

ಎರಡು ವರ್ಷವಾದರೂ ನ್ಯಾಯ ಕೊಡಿಸದ ಸಂಸದ ತೇಜಸ್ವಿ ಸೂರ್ಯ: ಡಾ.ಶಂಕರ್ ಗುಹಾ ದ್ವಾರಕಾನಾಥ್


ಎರಡು ವರ್ಷವಾದರೂ ನ್ಯಾಯ ಕೊಡಿಸದ ಸಂಸದ ತೇಜಸ್ವಿ ಸೂರ್ಯ: ಡಾ.ಶಂಕರ್ ಗುಹಾ ದ್ವಾರಕಾನಾಥ್

ಬೆಂಗಳೂರು: ಶ್ರೀ ಗುರು ರಾಘವೇಂದ್ರ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣ ಬೆಳಕಿಗೆ ಬಂದು ಎರಡು ವರ್ಷಗಳು ಕಳೆದರೂ, ಠೇವಣಿದಾರರಿಗೆ ನ್ಯಾಯ ಸಿಗದೆ ಕಂಗಾಲಾಗಿದ್ದಾರೆ. ಆದರೆ ಯಾವುದೇ ಕ್ರಮ ವಹಿಸದೆ, ಠೇವಣಿದಾರರಿಗೆ ನ್ಯಾಯ ಒದಗಿಸದೆ ಸಂಸದ ತೇಜಸ್ವಿ ಸೂರ್ಯ ತಮ್ಮನ್ನು ತಾವೇ ಪ್ರಶಂಸಿಸಿಕೊಳ್ಳುತ್ತಿದ್ದಾರೆ ಎಂದು ಶ್ರೀ ಗುರು ರಾಘವೇಂದ್ರ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ಷೇರುದಾರರು ಮತ್ತು ಠೇವಣಿದಾರರ ಹಿತರಕ್ಷಣಾ ವೇದಿಕೆಯ ವಕ್ತಾರ ಡಾ.ಶಂಕರ್ ಗುಹಾ ದ್ವಾರಕಾನಾಥ್ ಬೆಳ್ಳೂರು ಆರೋಪಿಸಿದ್ದಾರೆ.  

ಬುಧವಾರ ಪ್ರೆಸ್‌ಕ್ಲಬ್‌ನಲ್ಲಿ ಮಾತನಾಡಿದ ಅವರು, ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಆರೋಪಿಗಳ ವಿರುದ್ದ ಯಾವ ಕ್ರಮವನ್ನೂ ತೆಗೆದುಕೊಳ್ಳದ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ರವಿ ಸುಬ್ರಮಣ್ಯ, ಠೇವಣಿದಾರರಿಗೆ ಡಿಐಸಿಜಿಸಿ ಹಣವನ್ನು ಕೊಟ್ಟಿದ್ದೇವೆ ಎಂದು ಸಮಾರಂಭಗಳಲ್ಲಿ ಸನ್ಮಾನ ಮಾಡಿಸಿಕೊಳ್ಳುತ್ತಿದ್ದಾರೆ. ಅವರಿಗೆ ಜನರ ಕುರಿತು ಕಾಳಜಿ ಇದ್ದಲ್ಲಿ, ಪ್ರಕರಣದಲ್ಲಿ ವಂಚನೆಗೆ ಒಳಗಾದವರಿಗೆ ನ್ಯಾಯ ದೊರಕಿಸಲಿ ಆಗ ಬ್ಯಾಂಕ್‌ನ ಠೇವಣಿದಾರರೆಲ್ಲಾ ಸಂಸದರಿಗೆ ಸನ್ಮಾನ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು. 

ಕಳೆದ ಎರಡು ವರ್ಷಗಳಿಂದ ಬ್ಯಾಂಕ್‌ನ 100ಕ್ಕೂ ಹೆಚ್ಚು ಠೇವಣಿದಾರರು ಸಾವನ್ನಪ್ಪಿದ್ದಾರೆ. 46 ಸಾವಿರ ನೇರ ಠೇವಣಿದಾರರು ಹಾಗೂ 120 ಸಹಕಾರಿ ಸಂಸ್ಥೆಗಳಲ್ಲಿ ಠೇವಣಿಯಿಟ್ಟಿದ್ದ 80 ಸಾವಿರ ಜನ ಗುರು ರಾಘವೇಂದ್ರ ಬ್ಯಾಂಕ್ ವಂಚನೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದ ಅವರು, ಬಸವನಗುಡಿಯಲ್ಲಿರುವ ಗುರು ರಾಘವೇಂದ್ರ ಬ್ಯಾಂಕ್ ಸೇರಿದಂತೆ ಗುರುಸಾರ್ವಭೌಮ ಸೊಸೈಟಿ, ವಸಿಷ್ಠ ಕೋ-ಆಪರೇಟಿವ್ ಸೊಸೈಟಿ, ನಾಗರತ್ನ ಕೋ-ಆಪರೇಟಿವ್ ಸೊಸೈಟಿ, ಮಹಾಗಣಪತಿ ಕೋ-ಆಪರೇಟಿವ್ ಸೊಸೈಟಿ, ಬೆಳ್ಳಿ ಬೆಳಕು ಕೋ-ಆಪರೇಟಿವ್ ಸೊಸೈಟಿ ಸೇರಿದಂತೆ ಹಲವು ವಂಚನೆ ಪ್ರಕರಣಗಳು ನಡೆದರೂ, ಸಂಸದರು ಯಾವುದೇ ಕ್ರಮ ವಹಿಸುತ್ತಿಲ್ಲ. ಆದರೂ ತಮ್ಮನ್ನು ತಾವು ಹೊಗಳಿಕೊಂಡು ಸನ್ಮಾನ ಸಮಾರಂಭಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ಎಂದು ಅವರು ಕಿಡಿಕಾರಿದರು. 

ಜ.7ರಂದು ಶಾಸಕರು, ಸಂಸದರ ಸನ್ಮಾನ ಸಮಾರಂಭಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ಆಗಮಿಸುತ್ತಿದ್ದು, ಅಂದು ಠೇವಣಿದಾರರೆಲ್ಲಾ ಸೇರಿ ಸಚಿವರು, ಶಾಸಕರು, ಸಂಸದರಿಗೆ ಮುಖಾಮುಖಿ ಪ್ರಶ್ನೆ ಕೇಳಲಿದ್ದಾರೆ. ಇದೇ ಜ.10ರಂದು ವಂಚನೆಗೊಳಗಾದ ಬ್ಯಾಂಕ್ ಠೇವಣಿದಾರರಿಂದ ನೆಟ್ಟಕಲ್ಲಪ್ಪ ಸರ್ಕಲ್‌ನಲ್ಲಿರುವ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನಿರಾಕರಿಸಲಾಗಿದೆ. ಆದರೆ ಅದೇ ಮೈದಾನದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಸಭೆ ಸಮಾರಂಭಗಳನ್ನು ಮಾಡುತ್ತಲೇ ಇದ್ದಾರೆ.

-ಡಾ.ಶಂಕರ್ ಗುಹಾ ದ್ವಾರಕಾನಾಥ್, ಹಿತರಕ್ಷಣಾ ವೇದಿಕೆಯ ವಕ್ತಾರ.


SHARE THIS

Author:

0 التعليقات: