ಮುಸ್ಲಿಮರ ವಿರುದ್ಧ ದ್ವೇಷಭಾಷಣ;
ಪ್ರಧಾನಿ ಮೋದಿ ಮೌನವನ್ನು ಪ್ರಶ್ನಿಸಿದ ಗಣ್ಯ ನಾಗರಿಕರು
ಹೊಸದಿಲ್ಲಿ: ಹರಿದ್ವಾರ ಧರ್ಮಸಂಸತ್ನಲ್ಲಿ ಮುಸ್ಲಿಮರ ವಿರುದ್ಧ ದ್ವೇಷಭಾಷಣ ಮಾಡಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನವಾಗಿ ಇರುವುದನ್ನು ನಾಗರಿಕ ಸಮಾಜದ ಪ್ರಮುಖ ಗಣ್ಯರ ಗುಂಪು ಪ್ರಶ್ನಿಸಿದೆ. ಈ ದ್ವೇಷಭಾಷಣ ಪ್ರಕರಣದಲ್ಲಿ ಷಾಮೀಲಾಗಿರುವವರ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಗೀತರಚನೆಕಾರ ಜಾವೇದ್ ಆಖ್ತರ್ ಮತ್ತು ಬಾಲಿವುಡ್ ನಟ ನಾಸಿರುದ್ದೀನ್ ಶಾ ಸೇರಿದಂತೆ 278 ಮಂದಿ ಸಹಿ ಮಾಡಿರುವ ಹೇಳಿಕೆಯಲ್ಲಿ "ದ್ವೇಷಭಾಷಣದ ವಿರುದ್ಧ ಮಾತನಾಡುವಂತೆ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಗ್ರಹ ಬಲವಾಗಿ ಕೇಳಿಬಂದರೂ, ಮೋದಿಯವರ ಆಘಾತಕಾರಿ ಮೌನ ಅಚ್ಚರಿ ತಂದಿದೆ. ಭಾರತೀಯ ಮುಸ್ಲಿಮರ ನರಮೇಧಕ್ಕೆ ಕರೆ ನೀಡಿದ ಧರ್ಮಸಂಸದ್ ಸದಸ್ಯರ ವಿರುದ್ಧ ಆದರ್ಶಪ್ರಾಯ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಇಂಡಿಯನ್ ಮುಸ್ಲಿಮ್ಸ್ ಫಾರ್ ಸೆಕ್ಯುಲರ್ ಡೆಮಾಕ್ರಸಿ (ಐಎಂಎಸ್ಡಿ) ಆಗ್ರಹಿಸಿದೆ.
"ಪ್ರಧಾನಿಯವರ ಮೌನವೇ ಸಾಕಷ್ಟು ಮಾತನಾಡುತ್ತದೆ. ಇದು ಭಾರತೀಯ ಪ್ರಜಾಪ್ರಭುತ್ವದ ಅಣಕ, ಯಾವ ಮೌಲ್ಯಗಳನ್ನು ಎತ್ತಿ ಹಿಡಿಯುತ್ತೇವೆ ಎಂದು ಪ್ರಮಾಣವಚನ ಸ್ವೀಕಾರ ಸಂದರ್ಭದಲ್ಲಿ ಪ್ರಧಾನಿ ಹೇಳಿದ್ದರೋ ಅದೇ ಭಾರತೀಯ ಸಂವಿಧಾನದ ಮೌಲ್ಯಗಳ ಸ್ಪಷ್ಟ ಉಲ್ಲಂಘನೆ... ಅವರ ಮೌನಕ್ಕೆ ಕ್ಷಮೆ ಇಲ್ಲ" ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.
"ಮೋದಿ ಪ್ರಧಾನಿಯಾಗಿದ್ದ ಮೊದಲ ಅವಧಿಯಲ್ಲಿ ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎಂಬ ಭರವಸೆಯನ್ನು ಎಲ್ಲ ಭಾರತೀಯರಿಗೆ ನೀಡಿದ್ದರು. ಎರಡನೇ ಅವಧಿಯಲ್ಲಿ ಒಂದು ಹೆಜ್ಜೆ ಮುಂದಕ್ಕೆ ಹೋಗಿ 'ಸಬ್ಕಾ ಸಾಥ್ ಸಬ್ಕಾ ವಿಕಾಸ್ ಸಬ್ಕಾ ವಿಶ್ವಾಸ್' ಎಂಬ ಭರವಸೆ ನೀಡಿದ್ದಾರೆ. ಇದು ಸುಳ್ಳು ಆಶ್ವಾಸನೆ ಮತ್ತು ಪೊಳ್ಳು ಘೋಷಣೆಯಾಗಿದೆ ಎನ್ನುವುದು ಭಾರತೀಯ ಮುಸ್ಲಿಮರನ್ನು ದಮನಿಸುವ, ಗಾಯಗೊಳಿಸುವ ಮತ್ತು ಹಲ್ಲೆ ಮಾಡುವ ಕ್ರಮದಿಂದ ಸ್ಪಷ್ಟವಾಗಿ ತಿಳಿದುಬರುತ್ತದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವು ಮಂದಿ ಪತ್ರಕರ್ತರು, ವಕೀಲರು, ಶಿಕ್ಷಣ ತಜ್ಞರು, ನಾಗರಿಕ ಸಮಾಜ ಹೋರಾಟಗಾರರು ಮತ್ತು ಚಿತ್ರೋದ್ಯಮದ ಗಣ್ಯರು ಈ ಹೇಳಿಕೆಗೆ ಸಹಿ ಮಾಡಿದ್ದಾರೆ. ಡಿಸೆಂಬರ್ 17-19ರವರೆಗೆ ಹರಿದ್ವಾರದಲ್ಲಿ ನಡೆದ ಧರ್ಮಸಂಸದ್ ಸಭೆಯಲ್ಲಿ ಹಲವು ಮಂದಿ ಮುಸ್ಲಿಮರ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು.
0 التعليقات: