Sunday, 30 January 2022

ಗೋಡ್ಸೆಯ ‘ಉತ್ತರಾಧಿಕಾರಿಗಳಿಗೆ’ಭಾರತದಲ್ಲಿ ಜಾಗವಿಲ್ಲ: ತಮಿಳುನಾಡು ಸಿಎಂ ಸ್ಟಾಲಿನ್


 ಗೋಡ್ಸೆಯ ‘ಉತ್ತರಾಧಿಕಾರಿಗಳಿಗೆ’ಭಾರತದಲ್ಲಿ ಜಾಗವಿಲ್ಲ: ತಮಿಳುನಾಡು ಸಿಎಂ ಸ್ಟಾಲಿನ್

ಚೆನ್ನೈ: ಮಹಾತ್ಮಾ ಗಾಂಧಿಯವರ ಪುಣ್ಯತಿಥಿಯ ಅಂಗವಾಗಿ ರವಿವಾರ ರಾಜ್ಯಪಾಲ ಆರ್.ಎನ್.ರವಿ ಅವರೊಂದಿಗೆ ಇಲ್ಲಿಯ ಮರೀನಾ ಬೀಚ್‌ನಲ್ಲಿ ರಾಷ್ಟ್ರಪಿತನ ಪ್ರತಿಮೆಗೆ ಪುಷ್ಪಾಂಜಲಿಗಳನ್ನು ಸಲ್ಲಿಸಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು,ನಾಥುರಾಮ ಗೋಡ್ಸೆಯ ‘ಉತ್ತರಾಧಿಕಾರಿಗಳಿಗೆ’ ಭಾರತದ ನೆಲದಲ್ಲಿ ಜಾಗವಿಲ್ಲದಂತೆ ಮಾಡಲು ಪಣವನ್ನು ತೊಡುವಂತೆ ಜನರನ್ನು ಆಗ್ರಹಿಸಿದ್ದಾರೆ.

ಪ್ರೀತಿ ಮತ್ತು ಭ್ರಾತೃತ್ವವನ್ನು ಉತ್ತೇಜಿಸುವ ಮೂಲಕ ಏಕತೆಯನ್ನು ಎತ್ತಿ ಹಿಡಿಯಲು ಮಹಾತ್ಮಾ ಗಾಂಧಿಯವರ ಪುಣ್ಯತಿಥಿಯಂದು ಪಣವನ್ನು ತೊಡುವಂತೆ ಜನರನ್ನು ಟ್ವೀಟ್‌ನಲ್ಲಿ ಆಗ್ರಹಿಸಿರುವ ಸ್ಟಾಲಿನ್, ‘ಗೋಡ್ಸೆಯ ಉತ್ತರಾಧಿಕಾರಿಗಳು ಮತ್ತು ಅವರ ದುಷ್ಟ ಚಿಂತನೆಗಳಿಗೆ ಭಾರತದ ನೆಲದಲ್ಲಿ ಜಾಗವಿಲ್ಲ ಎಂದು ನಾವು ಶಪಥ ಮಾಡೋಣ ’ ಎಂದಿದ್ದಾರೆ. ಅವರು ತನ್ನ ಟ್ವಿಟರ್ ಪೋಸ್ಟ್‌ನಲ್ಲಿ ಯಾರನ್ನೂ ಸ್ಪಷ್ಟವಾಗಿ ಹೆಸರಿಸಿಲ್ಲ.

ರಾಜಭವನದಲ್ಲಿಯೂ ಗಾಂಧೀಜಿಯವರಿಗೆ ಪುಷ್ಪಾಂಜಲಿಗಳನ್ನು ಸಲ್ಲಿಸಿದ ರಾಜ್ಯಪಾಲ ರವಿ,ಅಸ್ಪಶ್ಯತೆಯ ವಿರುದ್ಧ ಶಪಥವನ್ನು ಬೋಧಿಸಿದರಲ್ಲದೆ ಹರಿಜನ ಸೇವಕ ಸಂಘದ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಮತ್ತು ರಾಜಭವನದ ಸಿಬ್ಬಂದಿಗಳು ಹಾಗೂ ಅಧಿಕಾರಿಗಳ ಜೊತೆ ಎರಡು ನಿಮಿಷಗಳ ಮೌನ ಆಚರಿಸಿದರು.


SHARE THIS

Author:

0 التعليقات: