Monday, 3 January 2022

ವಾಮಾಚಾರಕ್ಕೆ ಬಾಲಕ ಬಲಿ

ವಾಮಾಚಾರಕ್ಕೆ ಬಾಲಕ ಬಲಿ

ಮೈಸೂರು: ಬಾಲಕನನ್ನು ಸ್ನೇಹಿತರೇ ಕೆರೆಗೆ ತಳ್ಳಿ ಹತ್ಯೆಗೈದಿರುವ ಘಟನೆ ನಂಜನಗೂಡು ತಾಲೂಕಿನ ಹಳೇಪುರ ಗ್ರಾಮದಲ್ಲಿ ನಡೆದಿದ್ದು, ಹತ್ಯೆ ಹಿಂದೆ ವಾಮಾಚಾರದ ಕೃತ್ಯ ಅಡಗಿರುವುದು ಬೆಳಕಿಗೆ ಬಂದಿದೆ.

ನಂಜನಗೂಡು ತಾಲೂಕಿನ ಹೆಮ್ಮರಗಾಲ ಗ್ರಾಮದ ಸಿದ್ದರಾಜು ಎಂಬುವರ ಪುತ್ರ ಮಹೇಶ್ ಅಲಿಯಾಸ್ ಮನು (16) ಎಂಬಾತನೆ ವಾಮಾಚಾರಕ್ಕೆ ಬಲಿಯಾದವನು.

ಈತ 10ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಎಂದು ಹೇಳಲಾಗಿದ್ದು, ಈತನನ್ನು ಧನುರ್ ಅಮಾವಾಸ್ಯೆ ದಿನದಂದು ಸ್ನೇಹಿತರೇ ಬಲಿಕೊಟ್ಟಿದ್ದು, ಈ ವಿಚಾರ ತಿಳಿಯುತ್ತಿದ್ದಂತೆಯೇ ಊರಿನ ಜನ ಬೆಚ್ಚಿ ಬಿದ್ದಿದ್ದಾರೆ.

ಮಹೇಶನನ್ನು ವಾಮಚಾರದ ಉದ್ದೇಶದಿಂದ ಮೂವರು ಸ್ನೇಹಿತರು ಹತ್ಯೆಗೈದಿದ್ದು, ಆರೋಪಿಗಳ ಪೈಕಿ ಒಬ್ಬಾತ ಚಿಕ್ಕ ವಯಸ್ಸಿನಲ್ಲಿಯೇ ತಾತನಿಂದ ವಾಮಾಚಾರ ಮಾಡುವುದನ್ನ ಕಲಿತಿದ್ದನಂತೆ. ಧನುರ್ ಮಾಸದ ಅಮಾವಾಸ್ಯೆ ದಿನ ಬಲಿ ಕೊಟ್ಟರೆ ಇಷ್ಟಾರ್ಥ ಸಿದ್ಧಿಸುತ್ತವೆ ಎಂಬ ನಂಬಿಕೆಯಿಂದ ಮಹೇಶನನ್ನು ಬಲಿಕೊಡಲು ನಿರ್ಧಾರ ಮಾಡಿದ್ದು, ಅದರಂತೆ ಆತನನ್ನು ಪುಸಲಾಯಿಸಿ ಕೆರೆ ಬಳಿಗೆ ಕರೆದೊಯ್ದಿದ್ದಾರೆ. ಅಲ್ಲಿ ಗೊಂಬೆಯೊಂದನ್ನು ತಯಾರಿಸಿ ಅದರ ಮೇಲೆ ಮಹೇಶನ ಹೆಸರು ಬರೆದು ಪೂಜೆ ಮಾಡಿದ್ದಾರೆ. ಇದೆಲ್ಲವನ್ನು ಸ್ಥಳದಲ್ಲಿದ್ದ ಮಹೇಶ ನೋಡುತ್ತಿದ್ದನಾದರೂ ಆತನಿಗೆ ನನ್ನನ್ನು ಬಲಿಕೊಡುತ್ತಾರೆ ಎಂಬ ಚಿಕ್ಕ ಅನುಮಾನವೂ ಬಂದಿರಲಿಲ್ಲ. ಹೀಗಾಗಿ ಆತ ಸ್ನೇಹಿತರೊಂದಿಗೆ ಇದ್ದು ಪೂಜೆ ಮಾಡುವುದನ್ನು ನೋಡುತ್ತಿದ್ದನು.

ಪೂಜೆ ಮುಗಿದ ಬಳಿಕ ಮಹೇಶನಿಗೆ ಪೂಜೆ ಮುಗಿದಿದೆ ಬಾ ಕೆರೆಯ ಬಳಿಯಲ್ಲಿ ಪೂಜೆ ಮಾಡುವುದಿದೆ ಎಂದು ಕರೆದೊಯ್ದಿದ್ದಾರೆ. ಕೆರೆಯ ದಡಕ್ಕೆ ಕರೆದೊಯ್ದ ಆರೋಪಿಗಳು ಬಳಿಕ ಆತನನ್ನು ಕೆರೆಗೆ ತಳ್ಳಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ನಡುವೆ ಆ ಸ್ನೇಹಿತರ ಪೈಕಿ ಒಬ್ಬಾತ ಗ್ರಾಮದ ಹಿರಿಯರ ಬಳಿ ಮಹೇಶ ಕೆರೆಗೆ ಬಿದ್ದಿರುವ ವಿಚಾರವನ್ನು ಹೇಳಿದ್ದಾನೆ. ಹೀಗಾಗಿ ಗ್ರಾಮಸ್ಥರು ಕೆರೆಯ ಬಳಿ ಬಂದು ಶೋಧನೆ ಮಾಡಿದಾಗ ಮಹೇಶನ ಮೃತದೇಹ ದೊರೆತಿದೆ. ಅಲ್ಲದೆ ಕೆರೆ ಬಳಿ ವಾಮಾಚಾರ ಪೂಜೆ ಮಾಡಿದ ಕುರುಹುಗಳು ಪತ್ತೆಯಾಗಿದೆ. ಗೊಂಬೆ, ಕೋಳಿ, ಮಡಿಕೆ ಸೇರಿದಂತೆ ಇನ್ನಿತರ ಪದಾರ್ಥಗಳು ದೊರೆತಿದೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಕೌಲಂದೆ ಪೊಲೀಸರು ಪರಿಶೀಲನೆ ನಡೆಸಿದ್ದು ಅಪ್ರಾಪ್ತರಾಗಿರುವ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.SHARE THIS

Author:

0 التعليقات: