ಜನ್ಮದಿನವೇ ಸಾವಿನ ದಿನವಾಯ್ತು!
ಬೆಂಗಳೂರು: ಈಕೆಯ ಪಾಲಿಗಂತೂ ಜನ್ಮದಿನವೇ ಸಾವಿನ ದಿನವಾಗಿದೆ. ಇಂಥದ್ದೊಂದು ದುರಂತ ರಾಜಧಾನಿ ಬೆಂಗಳೂರಿನಲ್ಲಿ ಸಂಭವಿಸಿದೆ. ಮನೆಯವರು ಬೇಡ ಎಂದರೂ ಕೇಳದೆ ಹೋಗಿದ್ದವಳು ಸಾವಿಗೀಡಾದಂಥ ಪ್ರಕರಣವೊಂದು ನಡೆದುಹೋಗಿದೆ.ಮಹಶ್ರೀ ಸಾವಿಗೀಡಾದ ಯುವತಿ.
ಈಕೆ ಮಲ್ಲೇಶ್ವರ ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಜತೆಗೆ ಪಾರ್ಟ್ಟೈಮ್ ಆಗಿ ಟೆಕ್ಸ್ಟೈಲ್ಸ್ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಳು. ಆದರೆ ಇವತ್ತು ಜನ್ಮದಿನದ ಖುಷಿಯಲ್ಲಿ ಈಕೆ ಹೊರಗೆ ಹೋಗಿದ್ದು, ಮನೆಯವರ ಪಾಲಿಗಂತೂ ಅದು ಶೋಕದ ದಿನವಾಗಿ ಪರಿಣಮಿಸಿದೆ.
'ಇವತ್ತು ಜನ್ಮದಿನವಾದ್ದರಿಂದ ಕೆಲಸಕ್ಕೆ ಹೋಗಬೇಡ, ಮನೆಯಲ್ಲೇ ಇರು..' ಎಂದು ಪಾಲಕರು ಹೇಳಿದ್ದರು. ಆದರೂ ಕೇಳದ ಈಕೆ ಕೆಲಸಕ್ಕೆ ಹೊರಟಿದ್ದಳು. ನ್ಯೂ ಬಿಇಎಲ್ ಬಸ್ ನಿಲ್ದಾಣದವರೆಗೂ ಚಿಕ್ಕಪ್ಪನೇ ಈಕೆಯನ್ನು ಬಿಟ್ಟು ಬಂದಿದ್ದರು.
ಆದರೆ ಆ ನಂತರ ದುರಂತವೊಂದು ಸಂಭವಿಸಿದೆ. ಅಲ್ಲಿಂದ ಈಕೆ ಗೆಳೆಯನ ಜತೆ ಬೈಕ್ನಲ್ಲಿ ಹೋಗಿದ್ದಳು. ಆಗ ಮಾರ್ಗಮಧ್ಯೆ ಆಯತಪ್ಪಿ ಈಕೆ ಕೆಳಕ್ಕೆ ಬಿದ್ದಿದ್ದಾಳೆ. ಅದೇ ಸಮಯಕ್ಕೆ ಬರುತ್ತಿದ್ದ ಕ್ಯಾಂಟರ್ ವಾಹನ ಯುವತಿಯ ಮೇಲೆ ಸಾಗಿದ್ದರಿಂದ ಈಕೆ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಹೆಬ್ಬಾಳ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
0 التعليقات: