Monday, 17 January 2022

ನಮ್ಮ ಭೂಪ್ರದೇಶದ ಮೂಲಕ ಏಕಪಕ್ಷೀಯವಾಗಿ ರಸ್ತೆ ನಿರ್ಮಿಸುವುದನ್ನು ನಿಲ್ಲಿಸಬೇಕು: ಭಾರತಕ್ಕೆ ನೇಪಾಳ ಎಚ್ಚರಿಕೆ


 ನಮ್ಮ ಭೂಪ್ರದೇಶದ ಮೂಲಕ ಏಕಪಕ್ಷೀಯವಾಗಿ ರಸ್ತೆ ನಿರ್ಮಿಸುವುದನ್ನು ನಿಲ್ಲಿಸಬೇಕು: ಭಾರತಕ್ಕೆ ನೇಪಾಳ ಎಚ್ಚರಿಕೆ

ಕಠ್ಮಂಡು: ನೇಪಾಳದ ಭೂಪ್ರದೇಶದ ಮೂಲಕ ಯಾವುದೇ ರಸ್ತೆಯ ನಿರ್ಮಾಣ ಮತ್ತು ವಿಸ್ತರಣೆಯನ್ನು ಏಕಪಕ್ಷೀಯವಾಗಿ ಮಾಡುವುದನ್ನು ಭಾರತ ನಿಲ್ಲಿಸಬೇಕು ಎಂದು ನೇಪಾಳ ಸರಕಾರ ರವಿವಾರ ಹೇಳಿದೆ.

ಅಲ್ಲಿನ ಸಂವಹನ ಮತ್ತು ಐಟಿ ಸಚಿವ ಗ್ಯಾನೇಂದ್ರ ಬಹಾದುರ್ ಕರ್ಕಿ ಈ ಕುರಿತು ಹೇಳಿಕೆ ನೀಡಿದ್ದಾರೆ. ವಿವಾದಿತ ಸ್ಥಳವಾದ ಲಿಪುಲೇಖ್ ಎಂಬಲ್ಲಿ ರಸ್ತೆ ನಿರ್ಮಾಣ ಕುರಿತು ಭಾರತದ ಪ್ರಧಾನಿ ಘೋಷಿಸಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.

ನೇಪಾಳ ತನ್ನ ಪ್ರದೇಶವೆಂದು ಹೇಳಿರುವ ಕಾಲಾಪಾನಿ ಮತ್ತು ಲಿಪುಲೇಖ್ ಪ್ರದೇಶಗಳನ್ನೊಳಗೊಂಡ ಅಧಿಕೃತ ನಕ್ಷೆಯನ್ನು ಭಾರತ 2019ರಲ್ಲಿ ಬಿಡುಗಡೆಗೊಳಿಸಿದ ನಂತರ ಈ ವಿವಾದ ಹುಟ್ಟಿಕೊಂಡಿತ್ತು. ಭಾರತವು  ಲಿಪುಲೇಖ್ ಪಾಸ್ ಮೂಲಕ ಕೈಲಾಸ ಮಾನಸಸರೋವರಕ್ಕೆ ತೀರ್ಥಯಾತ್ರೆಗೆ ಹೊಸ ಹಾದಿ ಕಲ್ಪಿಸುವ ಹಾಗೂ ವಾಸ್ತವಿಕ ಗಡಿ ನಿಯಂತ್ರಣ ರೇಖೆ ಸಮೀಪ ಉತ್ತರಾಖಂಡದಲ್ಲಿ ಮೇ 2020ರಲ್ಲಿ 80 ಕಿಮೀ ಉದ್ದದ ರಸ್ತೆ ನಿರ್ಮಿಸಿದ ನಂತರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು.

ಈ ರಸ್ತೆ ಉದ್ಘಾಟನೆ ನಂತರ ನೇಪಾಳದಲ್ಲಿನ ಭಾರತೀಯ ರಾಯಭಾರಿ  ವಿನಯ್ ಮೋಹಮ್ ಕ್ವಾತ್ರ ಅವರನ್ನು ನೇಪಾಳದ ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗ್ಯಾವಲಿ ಅವರು ಬರ ಹೇಳಿ ರಸ್ತೆ ನಿರ್ಮಾಣಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಈ ರಸ್ತೆ ಸಂಪೂರ್ಣವಾಗಿ ಭಾರತದ ಭೂಪ್ರದೇಶದಲ್ಲಿದೆ ಎಂದು ಭಾರತ ಹೇಳಿತ್ತು.

ಲಿಪುಲೇಖ್ ರಸ್ತೆ ನಿರ್ಮಾಣ ತಮ್ಮ ಸರಕಾರದ ಸಾಧನೆಯೆಂದು ಡಿಸೆಂಬರ್ 30ರಂದು ಉತ್ತರಾಖಂಡದ ಹಲ್ದ್ವಾನಿ ಎಂಬಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮೋದಿ ಹೇಳಿದ್ದರು. ಮಹಾಕಾಳಿ ನದಿಯ ಪೂರ್ವದಲ್ಲಿರುವ ಲಿಪುಲೇಖ್, ಲಿಂಪಿಯಧುರ ಮತ್ತು ಕಾಲಾಪಾನಿ ಪ್ರದೇಶಗಳು ನೇಪಾಳದ ಅವಿಭಾಜ್ಯ ಅಂಗವಾಗಿದೆ ಎಂದು ರವಿವಾರ ನೇಪಾಳದ ಸಚಿವರು ಹೇಳಿದ್ದಾರೆ.


SHARE THIS

Author:

0 التعليقات: