Sunday, 16 January 2022

ಇದು ಸಮಸ್ತ ಹಿಂದುಳಿದ ಹಿಂದೂ ಸಮಾಜಕ್ಕೆ ಮಾಡಿದ ಅವಮಾನ: ರಮಾನಾಥ ರೈ ಆಕ್ರೋಶ


 ಇದು ಸಮಸ್ತ ಹಿಂದುಳಿದ ಹಿಂದೂ ಸಮಾಜಕ್ಕೆ ಮಾಡಿದ ಅವಮಾನ: ರಮಾನಾಥ ರೈ ಆಕ್ರೋಶ

ಮಂಗಳೂರು: ಶೋಷಿತ ಸಮಾಜಕ್ಕೆ ಸ್ವಾಭಿಮಾನದ ದಾರಿ ತೋರಿದ ಮಹಾನ್ ದಾರ್ಶನಿಕ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ‌ಚಿತ್ರವನ್ನು ಗಣರಾಜ್ಯೋತ್ಸವ ಪರೇಡ್ಗೆ ಕೇಂದ್ರ ಸರಕಾರ ತಿರಸ್ಕರಿಸಿರುವುದು ಸಮಸ್ತ ಹಿಂದುಳಿದ ಹಿಂದೂ ಸಮಾಜಕ್ಕೆ ಮಾಡಿರುವ ಅಪಮಾನ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದ.ಕ.  ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾರಾಯಣ ಗುರುಗಳು ಮನುಷ್ಯರೆಲ್ಲ ಒಂದೇ ಜಾತಿ ಒಂದೇ ಮತಕ್ಕೆ ಸೇರಿದವರು ಎನ್ನುವ ಮೂಲಕ ಹಿಂದೂ ಸಮಾಜದ ಹುಳುಕುಗಳ ವಿರುದ್ಧ ಜಾಗೃತಿ ಮೂಡಿಸಿದವರು. ಶೋಷಿತ ಸಮಾಜ ದವರಿಗೂ ದೇವಸ್ಥಾನದ ಪ್ರವೇಶ ಮಾಡುವ ಹಕ್ಕಿದೆ, ಅವರು ದೇವರ ಆರಾಧನೆಗಳನ್ನು ಮಾಡಬಹುದು ಎಂದು  ಮಂದಿರ ನಿರ್ಮಿಸಿ ಸಮಾಜದ ಶೋಷಿತರಿಗೆ ಧಾರ್ಮಿಕ ಹಸಿವನ್ನು ನೀಗಿಸಿ, ಸಾಮಾಜಿಕ ನ್ಯಾಯದ ಮೂಲಕ ಹೋಸ ದಾರಿಯನ್ನು ತೋರಿಸಿದ ದಾರ್ಶನಿಕ. ಮಹಾತ್ಮಾ ಗಾಂಧೀಜಿಗೂ ಪ್ರೇರಣೆಯಾದವರು, ಕೇರಳದಲ್ಲಿ ಧಾರ್ಮಿಕ, ಸಾಮಾಜಿಕ ಕ್ರಾಂತಿಗೆ ಕಾರಣರಾದ ವಿಶ್ವಾದ್ಯಂತ ಅಪಾರ ಅನುಯಾಯಿಗಳನ್ನು ಹೊಂದಿರುವ ನಾರಾಯಣ ಗುರುಗಳ ಸ್ತಬ್ಧ ಚಿತ್ರ ವನ್ನು ದಿಲ್ಲಿಯಲ್ಲಿ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪರೇಡ್ ಗಾಗಿ ಕೇರಳ ಸರಕಾರ ಕಳುಹಿಸಿರುವುದನ್ನು ಕೇಂದ್ರ ಸರಕಾರದ ಸಮಿತಿ ತಿರಸ್ಕರಿಸುವ ಮೂಲಕ ಭಾರತದ ಒಕ್ಕೂಟ ವ್ಯವಸ್ಥೆಯ ರಾಜ್ಯ ಸರಕಾರಕ್ಕೆ ಮನ್ನಣೆ ನೀಡದೆ ಅವಮಾನ ಮಾಡಿದೆ. ಇದರ ಹೊಣೆಯನ್ನು ಕೇಂದ್ರ ಸರಕಾರ ಹೊರಬೇಕಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಗಳಾದ ಶಶಿಧರ್ ಹೆಗ್ಡೆ, ಹರಿನಾಥ್ ಕೆ., ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ್, ಕಾಂಗ್ರೆಸ್ ಪದಾಧಿಕಾರಿಗಳಾದ ಅಬ್ದುಲ್ ರವೂಫ್, ದೀಪಕ್ ಪೂಜಾರಿ, ಶಾಹುಲ್ ಹಮೀದ್, ಅಶೋಕ್ ಡಿ.ಕೆ., ಅಪ್ಪಿ, ಪ್ರಕಾಶ್ ಸಾಲ್ಯಾನ್, ಪರೇಡ್ ಚಿತ್ತರಂಜನ್ ಶೆಟ್ಟಿ ಬೊಂಡಾಲ, ಸಿ.ಎಂ.ಮುಸ್ತಫ, ಉದಯ ಆಚಾರಿ, ಫಯಾಝ್ ಅಮ್ಮೆಮಾರ್ ಮೊದಲಾದವರು ಉಪಸ್ಥಿತರಿದ್ದರು.


SHARE THIS

Author:

0 التعليقات: