Tuesday, 11 January 2022

ಬಿಬಿಸಿ ಸಂದರ್ಶನದಲ್ಲಿ ಹರಿದ್ವಾರ ದ್ವೇಷದ ಭಾಷಣಗಳನ್ನು ಖಂಡಿಸಲು ನಿರಾಕರಿಸಿದ ಉತ್ತರ ಪ್ರದೇಶ ಉಪಮುಖ್ಯಮಂತ್ರಿ

 

ಬಿಬಿಸಿ ಸಂದರ್ಶನದಲ್ಲಿ ಹರಿದ್ವಾರ ದ್ವೇಷದ ಭಾಷಣಗಳನ್ನು ಖಂಡಿಸಲು ನಿರಾಕರಿಸಿದ ಉತ್ತರ ಪ್ರದೇಶ ಉಪಮುಖ್ಯಮಂತ್ರಿ

ಹೊಸದಿಲ್ಲಿ: ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್‍ನಲ್ಲಿ ಮುಸ್ಲಿಂ ಸಮುದಾಯದ ಹತ್ಯೆಗೆ ಕರೆ ನೀಡಿ ಮಾಡಿದ ದ್ವೇಷದ ಭಾಷಣಗಳನ್ನು ಖಂಡಿಸಲು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಬಿಬಿಸಿ ಹಿಂದಿಗೆ ನೀಡಿದ ಸಂದರ್ಶನದ ವೇಳೆ ನಿರಾಕರಿಸಿದ್ದಾರೆ.

"ಬಿಜೆಪಿ ಯಾರಿಗೂ ಏನನ್ನೂ ಸಾಬೀತು ಪಡಿಸುವ ಅಗತ್ಯವಿಲ್ಲ, ನಾವು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮೇಲೆ ನಂಬಿಕೆಯಿರಿಸುತ್ತೇವೆ,'' ಎಂದು ಮೌರ್ಯ ಅವರು ಬಿಬಿಸಿ ಪತ್ರಕರ್ತ ಅನಂತ್ ಝನಾನೆಗೆ ಹೇಳಿದರು.

ಈ ಕುರಿತು ಪ್ರಧಾನಿ, ಮುಖ್ಯಮಂತ್ರಿ ಮತ್ತು ಪಕ್ಷದ ಹಿರಿಯ ನಾಯಕರು ಮೌನಕ್ಕೆ ಶರಣಾಗಿರುವ ಕುರಿತು ಪ್ರಶ್ನಿಸಿದಾಗ "ಧಾರ್ಮಿಕ ನಾಯಕರಿಗೆ ಅವರಿಗೇನು ಬೇಕೋ ಅದನ್ನು ಹೇಳುವ ಹಕ್ಕಿದೆ. ನೀವೇಕೆ ಕೇವಲ ಹಿಂದು ನಾಯಕರುಗಳ ಬಗ್ಗೆ ಮಾತನಾಡುತ್ತೀರಿ? ಇತರರ ಹೇಳಿಕೆಗಳನ್ನು ನೋಡಿದ್ದೀರಾ? ಅದರ ಬಗ್ಗೆ ಏಕೆ ಮಾತನಾಡುತ್ತಿಲ್ಲ? 370ನೇ ವಿಧಿ ರದ್ದಾಗುವ ಮುನ್ನ ಜಮ್ಮು ಕಾಶ್ಮೀರ  ತೊರೆಯಬೇಕಾದ ಜನರ ಬಗ್ಗೆ ಏಕೆ ನೀವು ಮಾತನಾಡುತ್ತಿಲ್ಲ? ನೀವು ಪ್ರಶ್ನೆಗಳನ್ನೆತ್ತುವಾಗ, ಏಕಪಕ್ಷೀಯವಾಗಿರಲು ಸಾಧ್ಯವಿಲ್ಲ, ಧರ್ಮ ಸಂಸದ್ ಅನ್ನು ಬಿಜೆಪಿ ಆಯೋಜಿಸಿರಲಿಲ್ಲ. ಅದನ್ನು ಅರ್ಚಕರು ಆಯೋಜಿಸಿದ್ದರು. ಅವರೇನು  ಹೇಳುತ್ತಾರೋ ಅದು ಅವರಿಗೆ ಬಿಟ್ಟಿದ್ದು,'' ಎಂದು ಮೌರ್ಯ ಹೇಳಿದರು ಎಂದು thewire.in ವರದಿ ಮಾಡಿದೆ.

ಆಗ ಪತ್ರಕರ್ತ ದ್ವೇಷದ ಭಾಷಣ ನೀಡಿದ ಯತಿ ನರಸಿಂಗಾನಂದ, ಅನ್ನಪೂರ್ಣ ಅವರ ಕುರಿತು ಉಲ್ಲೇಖಿಸಿ "ಈ ಜನರು ಸೃಷ್ಟಿಸುವ ದ್ವೇಷದ  ವಾತಾವರಣವನ್ನು ಗಮನಿಸಿದಾಗ,'' ಎಂದು ಹೇಳುತ್ತಿದ್ದಂತೆಯೇ ಅವರನ್ನು ತಡೆದ ಮೌರ್ಯ "ಅವರು ಯಾವುದೇ ರೀತಿಯ ವಾತಾವರಣ ಸೃಷ್ಟಿಸುತ್ತಿಲ್ಲ. ಅವರ ವೇದಿಕೆಯಲ್ಲಿ ಹಾಗೆ ಹೇಳುವುದು ಸರಿ ಎಂದು ಅವರು ಹೇಳುತ್ತಿದ್ದಾರೆ. ನೀವು ಕೇಳುತ್ತಿರುವ ಪ್ರಶ್ನೆಗೂ ರಾಜಕೀಯಕ್ಕೂ ಸಂಬಂಧವಿಲ್ಲ. ಎಲ್ಲಾ ಧರ್ಮಗಳಲ್ಲೂ ಧಾರ್ಮಿಕ ನಾಯಕರುಗಳಿದ್ದಾರೆ. ಅವರೆಲ್ಲರೂ ಹೇಳಿದ್ದನ್ನು ಒಟ್ಟುಗೂಡಿಸಿ ನಂತರ ಪ್ರಶ್ನೆ ಕೇಳಿದರೆ ನಾನು ಉತ್ತರಿಸುತ್ತೇನೆ. ನೀವು ಈ ಪ್ರಶ್ನೆ ಕೇಳಲಿದ್ದೀರಿ ಎಂದು ಹೇಳಿದ್ದರೆ ನಾನು ಸಿದ್ಧ ಮಾಡಿಕೊಂಡು ಬರುತ್ತಿದ್ದೆ,'' ಎಂದರು.

ಒಂದು ಸಮುದಾಯದ ಮಂದಿಯನ್ನು ಹತ್ಯೆಗೈಯ್ಯುವ ಕುರಿತು ನೀಡಿದ ಭಾಷಣಗಳ ಬಗ್ಗೆ ಪತ್ರಕರ್ತ ಮೌರ್ಯ ಅವರ ಗಮನ ಸೆಳೆದಾಗ "ಪತ್ರಕರ್ತರಂತೆ ಮಾತನಾಡಿ, ನೀವು ಪತ್ರಕರ್ತರಂತೆ ಮಾತನಾಡುತ್ತಿಲ್ಲ, ಯಾರದ್ದೋ ಏಜಂಟರ ರೀತಿ ಮಾತನಾಡುತ್ತಿದ್ದೀರಿ,'' ಎಂದು ಹೇಳಿಕೊಂಡು ಮೈಕ್ರೋಫೋನ್ ತೆಗೆದು ತಮ್ಮ ಸ್ಥಾನದಿಂದ ಎದ್ದು ನಿಂತರು.


SHARE THIS

Author:

0 التعليقات: