ಪೆಗಾಸಸ್ ವಿವಾದ: ಭಾರತ-ಇಸ್ರೇಲ್ ರಕ್ಷಣಾ ಒಪ್ಪಂದ ಕುರಿತು ತನಿಖೆ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ
ಹೊಸದಿಲ್ಲಿ: ಇಸ್ರೇಲಿ ಸ್ಪೈವೇರ್ ಪೆಗಾಸಸ್ಗೆ ಸಂಬಂಧಿಸಿದಂತೆ ವಕೀಲ ಎಂ.ಎಲ್.ಶರ್ಮಾ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿ,ಸ್ಪೈವೇರ್ ಕುರಿತು ನ್ಯೂಯಾರ್ಕ್ ಟೈಮ್ಸ್ನ ವರದಿಯನ್ನು ಗಮನಕ್ಕೆ ತೆಗೆದುಕೊಳ್ಳುವಂತೆ ಮತ್ತು 2017ರ ಭಾರತ-ಇಸ್ರೇಲ್ ರಕ್ಷಣಾ ಒಪ್ಪಂದದ ಕುರಿತು ತನಿಖೆಗೆ ಆದೇಶಿಸುವಂತೆ ಕೋರಿದ್ದಾರೆ. ಭಾರತವು 2017ರಲ್ಲಿ ಇಸ್ರೇಲ್ ಜೊತೆಗಿನ ಎರಡು ಶತಕೋಟಿ ಡಾ.ಗಳ ಒಪ್ಪಂದದ ಭಾಗವಾಗಿ ಎನ್ಎಸ್ಒದ ಪೆಗಾಸಸ್ ಸ್ಪೈವೇರ್ನ್ನು ಖರೀದಿಸಿತ್ತು ಎನ್ನುವುದನ್ನು ಬಹಿರಂಗಗೊಳಿಸಿರುವ ದಿ ನ್ಯೂಯಾರ್ಕ್ ಟೈಮ್ಸ್ನ ತನಿಖಾ ವರದಿಯು ಈ ಬೇಹುಗಾರಿಕೆ ತಂತ್ರಾಂಶದ ಕುರಿತು ವಿವಾದವು ಮತ್ತೊಮ್ಮೆ ಹೊತ್ತಿಕೊಳ್ಳುವಂತೆ ಮಾಡಿದೆ. ಭಾರತದಲ್ಲಿ ಸ್ಪೈವೇರ್ನ ಕಾನೂನುಬಾಹಿರ ಬಳಕೆಯ ಬಗ್ಗೆ ಕಾಂಗ್ರೆಸ್ ಪಕ್ಷವು ಕೇಂದ್ರದ ವಿರುದ್ಧ ಮತ್ತೆ ದಾಳಿಯನ್ನು ಆರಂಭಿಸಿದ್ದು,ಸರಕಾರವು ಕಾನೂನುಬಾಹಿರ ಕಣ್ಗಾವಲು ಇರಿಸುತ್ತಿದೆ ಮತ್ತು ಇದು ದೇಶದ್ರೋಹವಾಗಿದೆ ಎಂದು ಆರೋಪಿಸಿದೆ.
ನ್ಯಾಯಾಲಯದ ಮುಂದಿರುವ ಪ್ರಕರಣದ ಮೂಲ ಅರ್ಜಿದಾರರಲ್ಲಿ ಓರ್ವರಾಗಿರುವ ಶರ್ಮಾ,ಒಪ್ಪಂದವು ಸಂಸತ್ತಿನ ಅನುಮತಿಯನ್ನು ಪಡೆದುಕೊಂಡಿರಲಿಲ್ಲ,ಆದ್ದರಿಂದ ಅದನ್ನು ರದ್ದುಗೊಳಿಸಿ,ಹಣವನ್ನು ಮರುವಸೂಲಿ ಮಾಡುವುದು ಅಗತ್ಯವಿದೆ ಎಂದು ವಾದಿಸಿದ್ದಾರೆ.
ನ್ಯಾಯದ ಹಿತಾಸಕ್ತಿಯಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವಂತೆ ಮತ್ತು ಒಪ್ಪಂದದ ಕುರಿತು ಹಾಗೂ ಸ್ಪೈವೇರ್ ಖರೀದಿಗೆ ಸಾರ್ವಜನಿಕ ಹಣದ ಬಳಕೆಯ ಬಗ್ಗೆ ತನಿಖೆ ನಡೆಸಲು ಸೂಕ್ತ ನಿರ್ದೇಶಗಳನ್ನು ಹೊರಡಿಸುವಂತೆ ಶರ್ಮಾ ಸರ್ವೋಚ್ಚ ನ್ಯಾಯಾಲಯವನ್ನು ಆಗ್ರಹಿಸಿದ್ದಾರೆ. ಇಸ್ರೇಲಿ ಸ್ಪೈವೇರ್ ಪೆಗಾಸಸ್ ಮತ್ತು ಕ್ಷಿಪಣಿ ವ್ಯವಸ್ಥೆಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಬೇಹುಗಾರಿಕೆ ಸಾಧನಗಳ ಖರೀದಿಗಾಗಿ ಭಾರತವು ಇಸ್ರೇಲ್ ಜೊತೆ 2017ರಲ್ಲಿ ಮಾಡಿಕೊಂಡಿದ್ದ ಅಂದಾಜು ಎರಡು ಶತಕೋಟಿ ಬಿಲಿಯನ್ ಡಾಲರ್ಗಳ ಖರೀದಿ ಒಪ್ಪಂದದ ಕೇಂದ್ರಬಿಂದುವಾಗಿದ್ದವು ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿತ್ತು.
0 التعليقات: