ಮಂಗಳೂರು ಪೊಲೀಸರ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ
ಮಂಗಳೂರು: ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಪ್ರತಿನಿಧಿಸುವ ಪೊಲೀಸ್ ಇಲಾಖೆಯ ಅಧಿಕಾರಿ ಸಿಬ್ಬಂದಿಗೆ ಅದನ್ನು ನಿರೂಪಿಸಲು ಕ್ರೀಡೆ ಪೂರಕ ಎಂದು ದ.ಕ. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮುರಳೀಧ ಪೈ ಅಭಿಪ್ರಾಯಿಸಿದ್ದಾರೆ.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಇಂದು ಮಂಗಳೂರು ನಗರ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕ್ರೀಡಾಕೂಟ ಪೊಲೀಸ್ ಇಲಾಖೆಯಲ್ಲಿನ ಪ್ರತಿಭೆಗಳನ್ನು ಗುರುತಿಸಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೋಷಿಸಲು ಕೂಡಾ ಸಹಕಾರಿ ಎಂದು ಹೇಳಿ ಅವರು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಕರ್ಣಾಟಕ ಬ್ಯಾಂಕ್ ಲಿ.ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್. ಭಾಗವಹಿಸಿ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.
ಇತ್ತೀಚೆಗೆ ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಆರು ಚಿನ್ನದ ಪದಕ ಜಯಿಸಿದ ದೀಪಾ ವಾಸುದೇವ ಭಟ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು ಅವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
ಇದೇ ವೇಳೆ, 43 ವರ್ಷಗಳ ಕಾಲ ವಿದೇಶದಲ್ಲಿ ಉದ್ಯೋಗಲ್ಲಿದ್ದು, ಮಂಗಳೂರಿಗೆ ವಾಪಾಸಾಗಿರುವ ಸ್ಥಳೀಯ ನಿವಾಸಿ ಆರ್ಥರ್ ಡಿಸೋಜ ದಂಪತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಅವರು ನಗರದ ಸಂಚಾರಿ ಪೊಲೀಸರಿಗೆ ಕೊಡುಗೆಯಾಗಿ ನೀಡಿರುವ ತಂಪು ಕನ್ನಡಕಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು.
ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ವೇಳೆ ಕರ್ಣಾಟಕ ಬ್ಯಾಂಕ್ ನೇತೃತ್ವದಲ್ಲಿ ನವೀಕೃತಗೊಂಡ ಪೊಲೀಸ್ ಕ್ಯಾಂಟೀನನ್ನು ಉದ್ಘಾಟಿಸಲಾಯಿತು.
ವೇದಿಕೆಯಲ್ಲಿ ಡಿಸಿಪಿಗಳಾದ ದಿನೇಶ್ ಕುಮಾರ್ ಬಿ.ಪಿ., ಚನ್ನವೀರಪ್ಪ ಹಡಪದ್ ಉಪಸ್ಥಿತರಿದ್ದರು.
ಡಿಸಿಪಿ ಹರಿರಾಂ ಶಂಕರ್ ವಂದಿಸಿದರು. ಎಸಿಪಿ ನಟರಾಜ್ ಕಾರ್ಯಕ್ರಮ ನಿರೂಪಿಸಿದರು.
0 التعليقات: