Monday, 17 January 2022

ಬಿಸಿಯೂಟಕ್ಕೆ ಕಳಪೆ ಗುಣಮಟ್ಟದ ಬೇಳೆಕಾಳು ಸರಬರಾಜು ಆರೋಪ: ಸರಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ


 ಬಿಸಿಯೂಟಕ್ಕೆ ಕಳಪೆ ಗುಣಮಟ್ಟದ ಬೇಳೆಕಾಳು ಸರಬರಾಜು ಆರೋಪ: ಸರಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳುರು: ''ಶಾಲಾ ಮಕ್ಕಳ ಬಿಸಿಯೂಟಕ್ಕೆ ಕಳಪೆ ಗುಣಮಟ್ಟದ ಬೇಳೆಕಾಳು ಸರಬರಾಜು ಮಾಡುವ ಮೂಲಕ ರಾಜ್ಯದ ಬಿಜೆಪಿ ಸರ್ಕಾರ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಮಕ್ಕಳಿಗೆ ವಿಷವುಣಿಸುವ ಈ ಕುಕೃತ್ಯದಲ್ಲಿ ಆಹಾರ ನಿಗಮದ ಅಧಿಕಾರಿಗಳೇ ಷಾಮೀಲಾಗಿದ್ದರೂ ರಾಜ್ಯದ ಬಿಜೆಪಿ ಸರ್ಕಾರ ಕಣ್ಣುಮುಚ್ಚಿಕುಳಿತಿದೆ'' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ,  ''ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ದಾವಣಗೆರೆ,  ಬಳ್ಳಾರಿಯಲ್ಲಿ ಕಳಪೆ ಬೇಳೆ ಪೂರೈಕೆಯ ದೂರುಗಳಿದ್ದರೂ ಆಹಾರ ನಿಗಮದ ಅಧಿಕಾರಿಗಳು ಕಳಪೆ ಬೇಳೆ ಸರಬರಾಜು ಮಾಡುತ್ತಿರುವ ಕಂಪನಿಗಳ ವಿರುದ್ಧ ಕ್ರಮಕೈಗೊಳ್ಳದೆ ಇರುವುದಕ್ಕೆ ಏನು ಕಾರಣ? ಲಂಚದ ಹಣದಲ್ಲಿ ಯಾರೆಲ್ಲ ಪಾಲುದಾರರು?''  ಎಂದು ಅವರು ಪ್ರಶ್ನಿಸಿದ್ದಾರೆ. 

''ಶಾಲಾ ಮಕ್ಕಳ ಪೌಷ್ಟಿಕತೆ ವೃದ್ಧಿಗಾಗಿ ನಮ್ಮ ಸರ್ಕಾರ ಜಾರಿಗೆ ತಂದಿದ್ದ ಕ್ಷೀರಭಾಗ್ಯ ಯೋಜನೆಯನ್ನು ಸ್ಥಗಿತಗೊಳಿಸಿದ್ದ ಸರ್ಕಾರ, ಮೊಟ್ಟೆ ಖರೀದಿಯಲ್ಲಿಯೂ ಕಮಿಷನ್ ನುಂಗಿದ ಆರೋಪ ಕೇಳಿ ಬಂದಿತ್ತು. ಈಗ ಮಕ್ಕಳ ಅನ್ನದ ತಟ್ಟೆಗೆ ಕೈ ಹಾಕಿದೆ. 

ಈ ಸಚಿವರು, ಅಧಿಕಾರಿಗಳು ಹೊಟ್ಟೆಗೆ ಏನು ತಿನ್ನುತ್ತಿದ್ದಾರೆ?''  ಎಂದು ಹೇಳಿದರು.

''ಕಳಪೆ ಗುಣಮಟ್ಟದ ಬೇಳೆ ಸರಬರಾಜು ಮಾಡುತ್ತಿರುವ ಕಂಪನಿಗಳನ್ನು ತಕ್ಷಣ ಬ್ಲಾಕ್ ಲೀಸ್ಟ್ ಗೆ ಸೇರಿಸಬೇಕು ಮತ್ತು ಕಂಪನಿಗಳ ಜೊತೆ ಷಾಮೀಲಾಗಿ ಭ್ರಷ್ಟಾಚಾರ ಎಸಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸುತ್ತೇನೆ'' ಎಂದು ತಿಳಿಸಿದರು.


SHARE THIS

Author:

0 التعليقات: