Monday, 3 January 2022

ಮಹಿಳೆಯರ ವಿವಾಹ ವಯಸ್ಸು ಏರಿಕೆ ಕುರಿತ ಮಸೂದೆ ಪರಿಶೀಲಿಸಲಿರುವ ಸಮಿತಿಯಲ್ಲಿ ಕೇವಲ ಒಬ್ಬರು ಮಹಿಳಾ ಸದಸ್ಯೆ

ಮಹಿಳೆಯರ ವಿವಾಹ ವಯಸ್ಸು ಏರಿಕೆ ಕುರಿತ ಮಸೂದೆ ಪರಿಶೀಲಿಸಲಿರುವ ಸಮಿತಿಯಲ್ಲಿ ಕೇವಲ ಒಬ್ಬರು ಮಹಿಳಾ ಸದಸ್ಯೆ

ಹೊಸದಿಲ್ಲಿ: ಮಹಿಳೆಯರ ವಿವಾಹ ವಯಸ್ಸನ್ನು 18 ರಿಂದ 21ಕ್ಕೆ ಏರಿಸುವ  ಬಾಲ್ಯ ವಿವಾಹ ತಡೆ (ತಿದ್ದುಪಡಿ) ಮಸೂದೆಯನ್ನು ಪರಾಮರ್ಶಿಸಲಿರುವ ಸಂಸದೀಯ ಸಮಿತಿಯಲ್ಲಿ ಇರುವ ಏಕೈಕ ಮಹಿಳಾ ಸದಸ್ಯೆ ತೃಣಮೂಲ ಸಂಸದೆ ಸುಷ್ಮಿತಾ ದೇವ್ ಅವರಾಗಿದ್ದಾರೆ ಎಂದು ವರದಿಯಾಗಿದೆ.

ಈ ಮಸೂದೆಯನ್ನು ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಂಡಿಸಿದ್ದರು. ನಂತರ ಅದನ್ನು ಪರಿಶೀಲನೆಗಾಗಿ 31 ಸದಸ್ಯರ ಸಮಿತಿಗೆ ಸಲ್ಲಿಸಲಾಗಿತ್ತು. 

ಹಿರಿಯ ಬಿಜೆಪಿ ನಾಯಕ ವಿನಯ್ ಸಹಸ್ರಬುದ್ಧೆ ಅವರ ನೇತೃತ್ವದ ಈ ಸಮಿತಿಯಲ್ಲಿ ಸುಷ್ಮಿತಾ ದೇವ್ ಅವರು ಏಕೈಕ ಮಹಿಳಾ ಸದಸ್ಯೆಯಾಗಿದ್ದಾರೆ. ಇನ್ನಷ್ಟು ಮಹಿಳಾ ಸದಸ್ಯೆಯರನ್ನು ಈ ಸಮಿತಿಗೆ ಸೇರಿಸುವ ಅಧಿಕಾರ ಅದರ ಅಧ್ಯಕ್ಷರಿಗಿದೆ ಎಂದು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಹೇಳುತ್ತಾರೆ.

ಈ ಮಸೂದೆಯು  ಭಾರತೀಯ ಕ್ರೈಸ್ತ ವಿವಾಹ ಕಾಯಿದೆ, ಪಾರ್ಸಿ ವಿವಾಹ ಮತ್ತು ವಿಚ್ಚೇದನ ಕಾಯಿದೆ, ಮುಸ್ಲಿಂ ವೈಯಕ್ತಿಕ ಕಾನೂನು (ಶರಿಯತ್) ಕಾಯಿದೆ, ವಿಶೇಷ ವಿವಾಹ ಕಾಯಿದೆ, ಹಿಂದು ವಿವಾಹ ಕಾಯಿದೆ ಮತ್ತು ವಿದೇಶ ವಿವಾಹ ಕಾಯಿದೆ-ಹೀಗೆ ಏಳು ವೈಯಕ್ತಿಕ ಕಾನೂನುಗಳನ್ನೂ ತಿದ್ದುಪಡಿಗೊಳಿಸುವ ಪ್ರಸ್ತಾವನೆ ಹೊಂದಿರುವುದರಿಂದ ಅದು ವೈಯಕ್ತಿಕ ಕಾನೂನುಗಳನ್ನು ಅತಿಕ್ರಮಿಸುವ ಒಂದು ಯತ್ನವಾಗಿದೆ ಎಂದು ಈಗಾಗಲೇ ಹಲವು ಸಂಸದರ ಟೀಕೆ ಎದುರಿಸುತ್ತಿದೆ.


SHARE THIS

Author:

0 التعليقات: