Thursday, 6 January 2022

ಸಿಬ್ಬಂದಿ ನಡುವೆ ಗುಂಪುಗಾರಿಕೆ- ಭಿನ್ನಾಭಿಪ್ರಾಯ ಹಿನ್ನೆಲೆ: ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ಹೊಸ ತಂಡ

 

ಸಿಬ್ಬಂದಿ ನಡುವೆ ಗುಂಪುಗಾರಿಕೆ- ಭಿನ್ನಾಭಿಪ್ರಾಯ ಹಿನ್ನೆಲೆ: ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ಹೊಸ ತಂಡ

ಮಂಗಳೂರು: ಪಾಂಡೇಶ್ವರದಲ್ಲಿರುವ ಮಹಿಳಾ ಠಾಣೆಯಲ್ಲಿ ಕೆಲ ಸಿಬ್ಬಂದಿ ನಡುವೆ ಗುಂಪುಗಾರಿಕೆ, ಭಿನ್ನಾಭಿಪ್ರಾಯ ಇರುವ ಬಗ್ಗೆ ಮಾಹಿತಿ ಬಂದಿರುವ ಹಿನ್ನೆಲೆಯಲ್ಲಿ ಅಲ್ಲಿದ್ದ 32 ಸಂಪೂರ್ಣ ಅಧಿಕಾರಿ, ಸಿಬ್ಬಂದಿಯನ್ನು ವರ್ಗಾವಣೆ (ಆರು ಮಂದಿ ಅಮಾನತು ಸೇರಿ) ಮಾಡಲಾಗಿದೆ. ಠಾಣೆಗೆ ಇಬ್ಬರು ಪಿಎಸ್‌ಐ, ಒಬ್ಬರು ಎಚ್‌ಸಿ ಹಾಗೂ 16 ಪಿಸಿಗಳು ಸೇರಿ 20 ಮಂದಿಯ ಹೊಸ ತಂಡವನ್ನು ನೇಮಕ ಮಾಡಿ ಪೊಲೀಸ್ ಆಯಕ್ತ ಎನ್. ಶಶಿಕುಮಾರ್ ಆದೇಶ ನೀಡಿದ್ದಾರೆ.

ಮಹಿಳಾ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ರೇವತಿಯವರಿಗೆ ಅಪಘಾತವಾಗಿದ್ದು, 2 ತಿಂಗಳ ಕಾಲ ವಿಶ್ರಾಂತಿ ಅಗತ್ಯವಿರುವ ಕಾರಣ ಸಿಸಿಆರ್‌ಬಿ ವಿಭಾಗದ ಪೊಲೀಸ್ ನಿರೀಕ್ಷಕರಾದ ಸಿದ್ಧನಗೌಡ ಎಚ್. ಬಜಂತ್ರಿಗೆ ಮಹಿಳಾ ಪೊಲೀಸ್ ಠಾಣೆಯ ಹೆಚ್ಚುವರಿ ಪ್ರಭಾರವನ್ನು ವಹಿಸಲಾಗಿದೆ. ಮಹಿಳಾ ಠಾಣೆಗೆ ಇನ್ನೂ 12 ಜನ ಸಿಬ್ಬಂದಿ ಅಗತ್ಯವಿದ್ದು, ಕೌಶಲ್ಯವನ್ನು ಆಧರಿಸಿ ನೇಮಕಕ್ಕೆ ಕ್ರಮ ವಹಿಸಲಾಗುವುದು. ಪ್ರಸ್ತುತ ಡಿಸಿಪಿ ಹಾಗೂ ಎಸಿಪಿಗಳು ಠಾಣೆಯ ಮೇಲುಸ್ತುವಾರಿ ನೋಡಲಿದ್ದು, ದಿನಂಪ್ರತಿ ಅಲ್ಲಿನ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲು ಸೂಚನೆ ನೀಡಲಾಗಿದೆ ಎಂದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಈ ಬಗ್ಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಹಿತಿ ನೀಡಿದ್ದು, ಮಹಿಳಾ ಮತ್ತು ಮಕ್ಕಳ ದೌರ್ಜನ್ಯದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಹಿಳಾ ಪೊಲೀಸ್ ಠಾಣೆಯು 1994 ನೇ ಇಸವಿಯಲ್ಲಿ ಕಾರ್ಯಾರಂಭಗೊಂಡಿದೆ. ಮಹಿಳಾ ಪೊಲೀಸ್ ಠಾಣೆಯು ಸೂಕ್ಷ್ಮ್ಮ ಪೊಲೀಸ್ ಠಾಣೆಯಾಗಿದ್ದು, ಮಹಿಳೆ ಮತ್ತು ಮಕ್ಕಳ ಸಂಸ್ಥೆಗಳು ಹಾಗೂ ಪ್ರಕರಣಗಳು ಇಲ್ಲಿ ಬರುವುದರಿಂದ, ತನಿಖೆಯಲ್ಲಿನ ಲೋಪ, ಅಶಿಸ್ತು, ಗುಂಪುಗಾರಿಕೆ ಮತ್ತು ಅಂತರಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ, ಠಾಣೆಯ ಕರ್ತವ್ಯದಲ್ಲಿ ಗುಣಮಟ್ಟ ಸುಧಾರಣೆಗಾಗಿ ಮತ್ತು ನ್ಯಾಯ ಸಮ್ಮತವಾಗಿ ಹಾಗೂ ಪಾರದರ್ಶಕವಾಗಿ ಕರ್ತವ್ಯ ನಿರ್ವಹಣೆ ಸಲುವಾಗಿ ಈ ಕ್ರಮಕೈಗೊಳ್ಳಲಾಗಿದೆ ಎಂದರು.

ಕಳೆದ ಆಗಸ್ಟ್ 26ರಂದು ರಾತ್ರಿ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿ ಠಾಣೆಯಲ್ಲಿ ಮದ್ಯಪಾನ ಮಾಡಿ ಪಾರ್ಟಿ ಮಾಡಿರುವುದು ಠಾಣೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಾವಳಿಯ ಪರಿಶೀಲನೆಯ ವೇಳೆ ದೃಢಪಟ್ಟಿದೆ. ಕೇಂದ್ರ ಉಪ ವಿಭಾಗದ ಎಸಿಪಿ ನಡೆಸಿದ್ದ ತನಿಖೆಯ ಪ್ರಾಥಮಿಕ ವಿಚಾರಣೆಯಿಂದ ಈ ಆರೋಪ ಮೇಲ್ನೋಟಕ್ಕೆ ದೃಢಪಟ್ಟಿತ್ತು.

ಇದಲ್ಲದೆ, ಮಹಿಳಾ ಪೊಲೀಸ್ ಠಾಣೆಯಲ್ಲಿ ಜುಲೈ 27ರಂದು ದಾಖಲಾದ ಪೊಕ್ಸೋ ಕಾಯ್ದೆ ಪ್ರಕರಣದಲ್ಲಿ ಕಂಕನಾಡಿ ಪೊಲೀಸ್ ಠಾಣೆಯ ಓರ್ವ ಸಿಎಚ್‌ಸಿಯನ್ನು ಜು.29ರಂದು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಈ ಪ್ರಕರಣದಲ್ಲಿ ನವೆಂಬರ್ 15ರಂದು ಮಾನ್ಯ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ಸಿಎಚ್‌ಸಿ ವಿರುದ್ದ ಇಲಾಖಾ ವಿಚಾರಣೆಯನ್ನು ಸಹ ನಡೆಸಲಾಗುತ್ತಿದೆ. ಈ ಪ್ರಕರಣದ ತನಿಖಾಧಿಕಾರಿಯಾದ ಮಹಿಳಾ ಪಿಎಸ್‌ಐ ರೋಸಮ್ಮರವರು ಕರ್ತವ್ಯ ಲೋಪ ಎಸಗಿರುವ ಕುರಿತು ಎಸಿಪಿ ಪರಿಶೀಲಿಸಿ ವರದಿ ಸಲ್ಲಿಸಿದ್ದರು. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಡಿಸಿಪಿಯವರೂ ವರದಿಯನ್ನು ಸಲ್ಲಿಸಿದ್ದಾರೆ.

ಈ ಎರಡೂ ಪ್ರತ್ಯೇಕ ಘಟನೆಗಳಲ್ಲಿ ಕರ್ತವ್ಯ ಲೋಪ ಹಾಗೂ ಠಾಣೆಯಲ್ಲಿ ಅಧಿಕಾರಿ ಸಿಬ್ಬಂದಿ ಅಶಿಸ್ತು ಸಾಬೀತಾದ ಹಿನ್ನೆಲೆಯಲ್ಲಿ ಮಹಿಳಾ ಠಾಣೆಯ ಪಿಎಸ್ಸೈ ರೋಸಮ್ಮ ಹಾಗೂ ಠಾಣೆಯಲ್ಲಿ ಪಾರ್ಟಿ ಮಾಡಿ ಮದ್ಯಪಾನ ಮಾಡಿದ ಆರೋಪದಲ್ಲಿ ಬಾಬು ನಾಯ್ಕ, ಮತ್ತು ದಯಾನಂದ ಎಂಬ ಇಬ್ಬರು ಎಎಸ್ಸೈ, ಸಿಎಚ್‌ಸಿ ರವಿಚಂದ್ರ ಹಾಗೂ ಇಬ್ಬರು ಮಹಿಳಾ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.


SHARE THIS

Author:

0 التعليقات: