Saturday, 15 January 2022

ಸರಕಾರ ದುಪ್ಪಟ್ಟು ವೇತನ ನೀಡುವ ನೆಪದಲ್ಲಿ ಅತಿಥಿ ಉಪನ್ಯಾಸಕರನ್ನು ನಿರುದ್ಯೋಗಿಗಳನ್ನಾಗಿಸುತ್ತಿದೆ: ಎಐಎಸ್ ಇಸಿ


 ಸರಕಾರ ದುಪ್ಪಟ್ಟು ವೇತನ ನೀಡುವ ನೆಪದಲ್ಲಿ ಅತಿಥಿ ಉಪನ್ಯಾಸಕರನ್ನು ನಿರುದ್ಯೋಗಿಗಳನ್ನಾಗಿಸುತ್ತಿದೆ: ಎಐಎಸ್ ಇಸಿ

ಬೆಂಗಳೂರು: ಸರಕಾರವು ಅತಿಥಿ ಉಪನ್ಯಾಸಕರ ವೇತನವನ್ನು ದುಪ್ಪಟ್ಟು ಮಾಡುವ ನೆಪದಲ್ಲಿ, ಅವರನ್ನು ನಿರುದ್ಯೋಗಿಗಳನ್ನಾಗಿ ಮಾಡಲು ರಾಜ್ಯ ಸರಕಾರವು ಮುಂದಾಗಿದೆ ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ(ಎಐಎಸ್‍ಇಸಿ)ಯ ಅಧ್ಯಕ್ಷ ಪ್ರೊ. ಅಲ್ಲಮಪ್ರಭು ಬೆಟ್ಟದೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ಅತಿಥಿ ಉಪನ್ಯಾಸಕರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಹೋರಾಟ ಮಾಡುತ್ತಿದ್ದಾರೆ. ಆದರೆ ಸರಕಾರವು ದುಪ್ಪಟ್ಟು ವೇತನ ಎಂಬ ನೆಪವೊಡ್ಡಿ ಅವರ ಹೋರಾಟದ ದಿಕ್ಕು ತಪ್ಪಿಸುತ್ತಿದೆ. ಈಗಿರುವ 8 ಗಂಟೆಗಳ ಕಾರ್ಯಭಾರವನ್ನು 15 ಗಂಟೆಗಳಿಗೆ ಹೆಚ್ಚಿಸಿ, ವೇತನವನ್ನು ದುಪ್ಪಟ್ಟು ಮಾಡುವುದರಲ್ಲಿ ಯಾವ ಅರ್ಥವಿದೆ ಎಂದು ಅವರು ಪ್ರಶ್ನಿಸಿದರು. 

ಕಾಲೇಜುಗಳಲ್ಲಿ ಇಬ್ಬರು ಅತಿಥಿ ಉಪನ್ಯಾಸಕರಿಗೆ ಹಂಚಿಕೆ ಮಾಡಲಾಗುವ ಕಾರ್ಯಭಾರವನ್ನು ಒಬ್ಬರಿಗೆ ಹಂಚಿಕೆ ಮಾಡುವಂತಾಗುತ್ತದೆ. ಇದರಿಂದ ಅರ್ಧದಷ್ಟು ಅತಿಥಿ ಉಪನ್ಯಾಸಕರು ನಿರುದ್ಯೋಗಿಗಳಾಗುತ್ತಾರೆ ಎಂದು ವಿವರಿಸಿದ ಅವರು, ದಶಕಗಳಿಂದ ದುಡಿಯುತ್ತಿರುವ ಅತಿಥಿ ಉಪನ್ಯಾಸಕರು ತಮ್ಮ ಸೇವಾ ಭದ್ರತೆಗಾಗಿ ಹೋರಾಟ ಮಾಡುತ್ತಿದ್ದಾರೆ. ಸರಕಾರವು ಅದನ್ನು ಪರಿಗಣಿಸದೆ, ಇಂತಹ ಒಡೆದು ಆಳುವ, ಅವೈಜ್ಞಾನಿಕ ಪರ್ಯಾಯ ನೀತಿಯನ್ನು ಜಾರಿಗೊಳಿಸುತ್ತಿದೆ. ಇದು ಸರಕಾರವು ಅತಿಥಿ ಉಪನ್ಯಾಸಕರಿಗೆ ನೀಡುತ್ತಿರುವ ಸಿಹಿ ಸುದ್ದಿಯಲ್ಲ. ಬದಲಾಗಿ ಕಹಿ ಸುದ್ದಿಯಾಗಿದೆ ಎಂದು ಅವರು ದೂರಿದರು. 


SHARE THIS

Author:

0 التعليقات: