Monday, 31 January 2022

ಹಿಜಾಬ್ ಹಾಕದೆ ಬರಲು ಸಿದ್ಧವಿಲ್ಲ ಎಂದಾದರೆ ಕಾಲೇಜು ಕಂಪೌಂಡ್ ಒಳಗೆ ಬರಬೇಡಿ : ಶಾಸಕ ರಘುಪತಿ ಭಟ್


 ಹಿಜಾಬ್ ಹಾಕದೆ ಬರಲು ಸಿದ್ಧವಿಲ್ಲ ಎಂದಾದರೆ ಕಾಲೇಜು ಕಂಪೌಂಡ್ ಒಳಗೆ ಬರಬೇಡಿ : ಶಾಸಕ ರಘುಪತಿ ಭಟ್

ಉಡುಪಿ: ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ/ವಸ್ತ್ರ ಸಂಹಿತೆಯ ಬಗ್ಗೆ ಸರಕಾರ ಉನ್ನತ ಮಟ್ಟದ ಸಮಿತಿ ರಚಿಸಿ ಅಧ್ಯಯನ ನಡೆಸಿ ಈ ಬಗ್ಗೆ ವರದಿ ನೀಡುವವರೆಗೆ ವಿದ್ಯಾರ್ಥಿನಿಯರು ಸಮವಸ್ತ್ರವನ್ನು ಧರಿಸಿ ತರಗತಿಗೆ ಹಾಜರಾಗಬೇಕು. ಒಂದು ವೇಳೆ ಹಿಜಾಬ್ ಹಾಕದೆ ಬರಲು ಸಿದ್ಧರಿಲ್ಲದಿದ್ದರೆ ಅಂತಹ ವಿದ್ಯಾರ್ಥಿನಿಯರು ಕಾಲೇಜಿನ ಕಂಪೌಂಡ್ ಒಳಗೆ ಬರುವುದು ಬೇಡ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.

ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ಕಾಲೇಜು ಅಭಿವೃದ್ಧಿ ಸಮಿತಿ, ಉಪನ್ಯಾಸಕರು ಮತ್ತು ಪೋಷಕ ರನ್ನು ಒಳಗೊಂಡ ಶಿಕ್ಷಣ ಸೇವಾ ಸಮಿತಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದ ಕುರಿತು ಅವರು ಮಾಧ್ಯಮದವರಿಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಭಾಗವಹಿಸಿದ್ದ ಆರು ಮಂದಿ ಪೈಕಿ ನಾಲ್ವರು ವಿದ್ಯಾರ್ಥಿನಿಯರು ಮತ್ತು ಅವರ ಪೋಷಕರಿಗೆ ಮನವಿ ಮಾಡಿದ್ದೇವೆ. ಈ ಹಂತದಲ್ಲಿ ತರಗತಿಗೆ ಹಿಜಾಬ್ ಹಾಕಿಕೊಂಡು ಬರಲು ಅನುಮತಿ ನೀಡಲು ಸಾಧ್ಯವಿಲ್ಲ. ಸರಕಾರ ರಚಿಸಲಿರುವ ಉನ್ನತ ಮಟ್ಟದ ಸಮಿತಿ ನಿರ್ಧಾರ ಪ್ರಕಟಿಸುವವರೆಗೆ ಕಾಯ ಬೇಕಾಗುತ್ತದೆ. ಅಲ್ಲಿಯವರೆಗೆ ಹಿಂದಿನಂತೆ ಕಾಲೇಜಿನ ಕಂಪೌಂಡ್ ಒಳಗೆ ಹಿಜಾಬ್ ಹಾಕಿಕೊಂಡು ಬಂದು ತರಗತಿಯಲ್ಲಿ ಹಿಜಾಬ್ ತೆಗೆಯಬೇಕೆಂದು ತಿಳಿಸಿದ್ದೇವೆ ಎಂದರು.

ನಾಳೆ ಪೋಷಕರ ನಿರ್ಧಾರ

‘ಕಾಲೇಜಿಗೆ ಬರುವುದಾದರೆ ಇಂದಿನಿಂದಲೇ ಬರಬಹುದು. ನಾಳೆಯಿಂದ ಬರುವುದಾದರೆ ತರಗತಿಯಲ್ಲಿ ಹಿಜಾಬ್ ಹಾಕದೆ ಬರುತ್ತೇವೆ ಎಂದು ನಿರ್ಧರಿಸಿದರೆ ಮಾತ್ರ ಕಾಲೇಜಿಗೆ ಬರಬೇಕು. ಇಲ್ಲದಿದ್ದರೆ ಕಾಲೇಜು ಆವರಣಕ್ಕೆ ಬಂದು ಪ್ರತಿಭಟನೆ ಮಾಡಲು ಅವಕಾಶ ನೀಡುವುದಿಲ್ಲ’ ಎಂದು ರಘುಪತಿ ಭಟ್ ಹೇಳಿದರು.

ಹಿಜಾಬ್ ಧರಿಸುವ ವಿದ್ಯಾರ್ಥಿನಿಯರು ಕಾಲೇಜಿಗೆ ಬಂದು ಇಲ್ಲಿನ ಶೈಕ್ಷಣಿಕ ವಾತಾವರಣವನ್ನು ಹಾಳು ಮಾಡಬಾರದು. ಹಿಜಾಬ್ ಧರಿಸದೆ ಬರುವುದಾದರೆ ಬರಲಿ, ಇಲ್ಲದಿದ್ದರೆ ಬರುವುದು ಬೇಡ. ಇದಕ್ಕೆ ಶೇ.50ರಷ್ಟು ಪೋಷಕರು ಒಪ್ಪಿದಂತೆ ಕಾಣುತ್ತದೆ. ಆದರೆ ಪೋಷಕರು, ನಾವು ಮಹಿಳೆಯರು ಮಾತ್ರ ಬಂದಿರುವುದರಿಂದ ನಮ್ಮ ಮನೆಯವರ ಬಳಿ ಅಭಿಪ್ರಾಯ ಕೇಳಿ ನಾಳೆ ಸಂಜೆ ಯೊಳಗೆ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ.

ಆದುದರಿಂದ ಇಲ್ಲಿ ಇನ್ನು ಮುಂದೆ ಗೊಂದಲ ಹಾಗೂ ವಿವಾದಗಳಿಗೆ ಅವಕಾಶ ಇಲ್ಲ. ಶಿಸ್ತನ್ನು ಪಾಲಿಸುವವರು ಮಾತ್ರ ಕಾಲೇಜಿಗೆ ಬರಬಹುದು. ಸಭೆಯಲ್ಲಿದ್ದ ಮುಖಂಡರು ಕೂಡ ಪೋಷಕರಿಗೆ ಮನವರಿಕೆ ಮಾಡಿದ್ದಾರೆ. ಸೌಹಾರ್ದಯುತವಾಗಿ ಪೋಷಕರು ಇದನ್ನು ಬಗೆಹರಿಸಬೇಕು ಎಂದು ರಘುಪತಿ ಭಟ್ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಯಶ್‌ಪಾಲ್ ಸುವರ್ಣ, ಕರ್ನಾಟಕ ಬ್ಯಾರಿ ಅಕಾಡಮಿ ಅಧ್ಯಕ್ಷ ರಹೀಂ ಉಚ್ಚಿಲ, ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯದರ್ಶಿ ಸಲೀಂ ಅಂಬಾಗಿಲು, ದಾವೂದ್ ಅಬೂಬಕ್ಕರ್ ಹಾಗೂ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.

ಆವರಣದೊಳಗೆ ಪ್ರವೇಶ ನಿರ್ಬಂಧ

ನಾಳೆಯಿಂದ ಕಾಲೇಜು ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಿಬ್ಬಂದಿ ಹೊರತುಪಡಿಸಿ ಬೇರೆ ಯಾರೂ ಕಾಲೇಜು ಆವರಣ ಪ್ರವೇಶಿಸುವಂತಿಲ್ಲ. ಯಾವುದೇ ಸಂಘ ಸಂಸ್ಥೆಗಳು, ಮಾಧ್ಯಮದವರಿಗೂ ಪ್ರವೇಶ ನೀಡಬಾರದು. ಅದನ್ನು ಮೀರಿ ಪ್ರವೇಶಿಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಸಭೆಯಲ್ಲಿ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ರಘುಪತಿ ಭಟ್ ಹೇಳಿದರು.

ಇನ್ನು ಎರಡು ತಿಂಗಳಲ್ಲಿ ಪರೀಕ್ಷೆ ಬರುತ್ತದೆ. ಈ ವಿವಾದದಿಂದಾಗಿ ಬೇರೆ ಮಕ್ಕಳಿಗೆ ಓದಲು ಆಗುತ್ತಿಲ್ಲ. ಆದುದರಿಂದ ಇದನ್ನು ಇಲ್ಲಿಗೆ ಮುಗಿಸಿ ಎಂದು ಪೋಷಕರು ತುಂಬಾ ದೂರು ನೀಡುತ್ತಿದ್ದಾರೆ. ಆದುದರಿಂದ ಕಾಲೇಜಿನ ಆವರಣದೊಳಗೆ ಯಾರು ಕೂಡ ಮನವಿ ಕೊಡಲು ಬರಬಾರದು. ಮನವಿ ನೀಡುವುದಿದ್ದರೆ ಜಿಲ್ಲಾಧಿಕಾರಿಗಳಿಗೆ ನೀಡಲಿ ಎಂದರು.

‘ಹಿಜಾಬ್ ಹಾಕಿ ತರಗತಿ ಬರಲು ಅವಕಾಶ ನೀಡುವಂತೆ ಕೇಳುವ ಹಕ್ಕನ್ನು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಈ ವಿದ್ಯಾರ್ಥಿನಿಯರಿಗೆ ನೀಡಿದೆ. ಹಾಗೆ ಇವರು ತಮ್ಮ ಹಕ್ಕನ್ನು ಕೇಳಿರುವುದು ಅಭಿನಂದನೀಯ. ಅದೇ ರೀತಿ ಇದೀಗ ಸರಕಾರ ಹೊರಡಿಸಿರುವ ಆದೇಶವನ್ನು ಪಾಲಿಸುವುದು ಕೂಡ ಪ್ರತಿಯೊಬ್ಬರ ಕರ್ತವ್ಯ ವಾಗಿದೆ. ಇಲ್ಲಿ ಮುಸ್ಲಿಮರಾಗಿ ನಿಮ್ಮ ಕರ್ತವ್ಯವನ್ನು ಪಾಲಿಸಿದ್ದೀರಿ, ಹಾಗೆ ಭಾರತೀಯರಾಗಿ ಸರಕಾರದ ಆದೇಶವನ್ನು ಪಾಲಿಸುವ ಮೂಲಕ ಸಂವಿಧಾನಕ್ಕೆ ಗೌರವ ನೀಡಬೇಕೆಂದು ಅವರಿಗೆ ಮನವರಿಕೆ ಮಾಡಿದ್ದೇವೆ’

-ರಹೀಂ ಉಚ್ಚಿಲ, ಅಧ್ಯಕ್ಷರು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡವಿು


SHARE THIS

Author:

0 التعليقات: