Saturday, 1 January 2022

ಸುರತ್ಕಲ್ : ಕೂಲಿ ಕಾರ್ಮಿಕನ ಕೊಲೆಗೈದ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ


 ಸುರತ್ಕಲ್ : ಕೂಲಿ ಕಾರ್ಮಿಕನ ಕೊಲೆಗೈದ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಮಂಗಳೂರು: ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾನ ಎಂಬಲ್ಲಿ ಮೂರು ವರ್ಷದ ಹಿಂದೆ ಕೂಲಿ ಕಾರ್ಮಿಕನನ್ನು ಕೊಲೆಗೈದು ದೇಹವನ್ನು ತುಂಡು ಮಾಡಿ ತೋಡಿಗೆ ಎಸೆದ ಪ್ರಕರಣದ ಇಬ್ಬರು ಆರೋಪಿಗಳಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಸಪ್ಪ ಬಾಲಪ್ಪ ಜಕಾತಿ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಮಂಗಳೂರು, ಸುರತ್ಕಲ್ ಮತ್ತಿತರ ಕಡೆಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಬಾಗಲಕೋಟೆ ತಳಿಕೇರಿ ಗ್ರಾಮದ ಗೌಡಪ್ಪ ಗೌಡ ಸಣ್ಣಗೌಡ್ರು ಮತ್ತು ಕೊಪ್ಪಳ ಜಿಲ್ಲೆಯ ಕಬ್ಬರಗಿ ಗ್ರಾಮದ ಹುಲ್ಲಪ್ಪ ಬಸಪ್ಪ ಸೂಡಿ ಜೀವಾವಧಿ ಶಿಕ್ಷೆಗೊಳಗಾದ ಆರೋಪಿಗಳು.

ಕೂಲಿಕಾರ್ಮಿಕ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮದ ಮರಿಯಪ್ಪ ಎಂಬವರನ್ನು ಈ ಆರೋಪಿಗಳು ಕೊಲೆಗೈದಿದ್ದರು.

ಪ್ರಕರಣದ ವಿವರ:

 ಗೌಡಪ್ಪ ಗೌಡ ಮತ್ತು ಮರಿಯಪ್ಪ ಸುರತ್ಕಲ್ ಕಾನದ ಎಸ್ಟೇಟ್‌ ವೊಂದರ ಮನೆಯಲ್ಲಿ ವಾಸವಾಗಿದ್ದರು. ಮರಿಯಪ್ಪ ತನ್ನ ಉಳಿತಾಯದ 10,000 ರೂ.ವನ್ನು ತೆಗೆದಿಡಲು ಗೌಡಪ್ಪ ಗೌಡನಿಗೆ ನೀಡಿದ್ದರು. ಕೆಲವು ಸಮಯದ ಬಳಿಕ ತಾನು ಊರಿನಲ್ಲಿ ಮನೆ ಕಟ್ಟಿಸುತ್ತಿದ್ದು, ಆ ಹಣವನ್ನು ಮರಳಿಸಬೇಕು ಎಂದು ಗೌಡಪ್ಪ ಗೌಡನಲ್ಲಿ ಮರಿಯಪ್ಪ ಕೇಳಿದ್ದರು. ಇದರಿಂದ ಕೋಪಗೊಂಡಿದ್ದ ಗೌಡಪ್ಪ ಗೌಡ ತನ್ನ ಪರಿಚಿತನಾದ ಹುಲ್ಲಪ್ಪ ಬಸಪ್ಪ ಸೂಡಿಯೊಂದಿಗೆ ಸೇರಿ ಮರಿಯಪ್ಪನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ.

2018ರ ಮೇ 31ರಂದು ರಾತ್ರಿ ಮರಿಯಪ್ಪ ಮತ್ತೆ ತನ್ನ ಹಣ ವಾಪಸು ನೀಡುವಂತೆ ಒತ್ತಾಯ ಮಾಡಿದ್ದ. ಆರೋಪಿಗಳು ಕೊಲೆ ಮಾಡುವ ಉದ್ದೇಶದಿಂದಲೇ ತಂದಿಟ್ಟಿದ್ದ ಕೊಡಲಿಯಿಂದ ಮರಿಯಪ್ಪನ ತಲೆಗೆ ಹೊಡೆದು ಬಳಿಕ ಚೂರಿಯಿಂದ ಮೃತದೇಹವನ್ನು ತುಂಡು ಮಾಡಿ ಅದಕ್ಕೆ ಪಂಚೆಯನ್ನು ಕಟ್ಟಿ ಮನೆಯ ಪಕ್ಕದಲ್ಲಿ ಮಳೆ ನೀರು ಹರಿಯುವ ತೋಡಿಗೆ ಬಿಸಾಡಿದ್ದರು.

ಪಂಪ್ ದುರಸ್ತಿಗೆ ಬಂದಾಗ ಮೃತದೇಹ ಪತ್ತೆ

ಸುರತ್ಕಲ್ ಚೊಕ್ಕಬೆಟ್ಟುವಿನ ಬಳಿ ಸೇತುವೆ ಕಾಮಗಾರಿ ಸಂದರ್ಭ ಕೆಟ್ಟು ಹೋಗಿದ್ದ ಪಂಪ್ ದುರಸ್ತಿ ಮಾಡಲು ಗುತ್ತಿಗೆದಾರರು 2018ರ ಜೂ.2ರಂದು ಬಂದಿದ್ದಾಗ ಮಳೆನೀರು ಹರಿಯುವ ತೋಡಿನಲ್ಲಿ ಮೃತದೇಹ ಪತ್ತೆಯಾಗಿತ್ತು. ತಕ್ಷಣ ಅವರು ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದರು. ಘಟನೆಯ ದೃಶ್ಯಗಳು ಪಕ್ಕದ ಫ್ಲಾಟ್‌ನಲ್ಲಿ ಅಳವಡಿಸಲಾದ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದವು.

ಪೊಲೀಸ್ ನಿರೀಕ್ಷಕರಾಗಿದ್ದ ರಾಮಕೃಷ್ಣ ಕೆ.ಜಿ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಅಭಿಯೋಜನಾ ಪರವಾಗಿ 21 ಮಂದಿ ಸಾಕ್ಷಿದಾರರನ್ನು ನ್ಯಾಯಾಲಯದಲ್ಲಿ ವಿಚಾರಿಸಲಾಗಿತ್ತು.

ಜೀವಾವಧಿ ಶಿಕ್ಷೆ

ಕೊಲೆ ಕೃತ್ಯಕ್ಕೆ ಜೀವಾವಧಿ ಶಿಕ್ಷೆ ಮತ್ತು ತಲಾ 5,000 ರೂ. ದಂಡ, ದಂಡದ ಹಣ ಪಾವತಿಸಲು ತಪ್ಪಿದರೆ ಹೆಚ್ಚುವರಿ 2 ತಿಂಗಳು ಜೈಲು ಶಿಕ್ಷೆ, ಸಾಕ್ಷನಾಶ ಅಪರಾಧಕ್ಕೆ 2 ವರ್ಷ ಜೈಲು ಶಿಕ್ಷೆ ಮತ್ತು 2,000 ರೂ. ದಂಡ, ದಂಡದ ಹಣ ಪಾವತಿಸಲು ತಪ್ಪಿದರೆ ಹೆಚ್ಚುವರಿಯಾಗಿ 1 ತಿಂಗಳು ಜೈಲು ಶಿಕ್ಷೆ ವಿಧಿಸಿ ನ್ಯಾಯಾಧೀಶ ಬಸಪ್ಪ ಬಾಲಪ್ಪ ಜಕಾತಿ ತೀರ್ಪು ನೀಡಿದ್ದಾರೆ.

ದಂಡದ ಹಣದಲ್ಲಿ 10,000 ರೂ.ಗಳನ್ನು ಕೊಲೆಯಾದ ಮರಿಯಪ್ಪರ ಪತ್ನಿಗೆ ನೀಡಲು ಹಾಗೂ ಪತ್ನಿ ಮತ್ತು ಆಕೆಯ ಮಕ್ಕಳಿಗೆ ಸೂಕ್ತ ಪರಿಹಾರ ನೀಡಲು ದ.ಕ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶಿಸಿ ಡಿ.31ರಂದು ತೀರ್ಪು ನೀಡಿದ್ದಾರೆ.

ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ನಾರಾಯಣ ಶೇರಿಗಾರ್ ಯು. ವಾದ ಮಂಡಿಸಿದ್ದರು.


SHARE THIS

Author:

0 التعليقات: