ಮಾರ್ಗಮಧ್ಯೆ ಶಿಫ್ಟ್ ಮುಗೀತೆಂದು ವಿಮಾನ ಹಾರಿಸಲು ನಿರಾಕರಿಸಿದ ಪೈಲಟ್!
ಬಹುತೇಕ ಎಲ್ಲಾ ಉದ್ಯೋಗಗಳಲ್ಲೂ ಶಿಫ್ಟ್ ಪ್ರಕಾರ ಕೆಲಸ ಮಾಡಬೇಕಿರುತ್ತದೆ.ಅವರವರ ಶಿಫ್ಟ್ ಮುಗಿದ ಬಳಿಕ ಮನೆ ಕಡೆ ಓಡುವ ಧಾವಂತದಲ್ಲಿರುತ್ತಾರೆ. ಆದರೆ ಕೆಲವೊಮ್ಮೆ ಶಿಫ್ಟ್ ಮುಗಿದ ಮೇಲೂ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಇಲ್ಲೊಬ್ಬ ಪೈಲಟ್ ವಿಮಾನ ಹಾರಿಸುವಾಗ ಮಾರ್ಗ ಮಧ್ಯೆ ತನ್ನ ಶಿಫ್ಟ್ ಮುಗೀತೆಂದು ವಿಮಾನ ಹಾರಿಸಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದ ಘಟನೆ ನಡೆದಿದೆ.
ಹೌದು, ಹವಾಮಾನ ವೈಪರೀತ್ಯದಿಂದಾಗಿ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ವಾತಾವರಣ ಸರಿಯಾದ ಬಳಿಕ, ಇಲ್ಲಿಗೆ ನನ್ನ ಪಾಳಿ ಮುಗಿಯಿತು, ಮುಂದೆ ವಿಮಾನ ಹಾರಿಸಲ್ಲ ಎಂದು ಪಾಕಿಸ್ತಾನದ ಪೈಲಟ್ ನಿರಾಕರಿಸಿದ್ದಾನೆ.
PK-9754 ವಿಮಾನ ರಿಯಾದ್ನಿಂದ ಟೇಕ್ ಆಫ್ ಆಗಿ ಇಸ್ಲಾಮಾಬಾದ್ನಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಸೌದಿ ಅರೇಬಿಯಾದ ದಮ್ಮಾಮ್ನಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನ ತುರ್ತು ಭೂಸ್ಪರ್ಶ ಮಾಡಿದ ಬಳಿಕ ಪೈಲಟ್ ಮತ್ತೆ ವಿಮಾನ ಹಾರಿಸಲು ನಿರಾಕರಿಸಿದ್ದಾನೆ. ಯಾಕೆಂದರೆ ಇಲ್ಲಿಗೆ ತನ್ನ ಪಾಳಿ ಮುಗಿಯಿತು, ಮುಂದೆ ವಿಮಾನ ಹಾರಿಸಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದಿದ್ದಾನೆ.
ಇದರಿಂದ ಪ್ರಯಾಣಿಕರು ಕೋಪಗೊಂಡು ವಿಮಾನದಿಂದ ಕೆಳಗಿಳಿದು, ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ಹೆಚ್ಚು ಉದ್ವಿಗ್ನವಾಗುತ್ತಿದ್ದಂತೆ, ಅದನ್ನು ನಿಯಂತ್ರಣಕ್ಕೆ ತರಲು ದಮ್ಮಾಮ್ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯನ್ನು ಕರೆಯಲಾಯಿತು. ಕೊನೆಗೆ, ಪಾಕಿಸ್ತಾನದ ಇಸ್ಲಾಮಾಬಾದ್ಗೆ ತೆರಳುವವರೆಗೆ ಪ್ರಯಾಣಿಕರಿಗೆ ಹೋಟೆಲ್ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಯಿತು.
"ವಿಮಾನ ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ಪೈಲಟ್ ವಿಶ್ರಾಂತಿ ಪಡೆಯಬೇಕು. ಪ್ರಯಾಣಿಕರು ಇಸ್ಲಾಮಾಬಾದ್ ವಿಮಾನ ನಿಲ್ದಾಣವನ್ನು ರಾತ್ರಿ 11 ಗಂಟೆಗೆ ತಲುಪುತ್ತಾರೆ. ಅಲ್ಲಿಯವರೆಗೆ ಹೋಟೆಲ್ಗಳಲ್ಲಿ ಉಳಿದುಕೊಳ್ಳಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ" ಎಂದು ಪಾಕಿಸ್ತಾನ್ ಇಂಟರ್ನ್ಯಾಶನಲ್ ಏರ್ಲೈನ್ಸ್ ವಕ್ತಾರರನ್ನು ಉಲ್ಲೇಖಿಸಿ ದಿ ಗಲ್ಫ್ ನ್ಯೂಸ್ ವರದಿ ಮಾಡಿದೆ.
ವಿಮಾನ ತುರ್ತು ಭೂಸ್ಪರ್ಶವಾದ ನಂತರ ಪ್ರಯಾಣಿಕರು ಪರದಾಡುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ನವೆಂಬರ್ನಲ್ಲಿ, ಇಂಜಿನ್ ವೈಫಲ್ಯದಿಂದಾಗಿ ಯುಎಸ್ಗೆ ಹೋಗುವ ವಿಮಾನವು ಐರ್ಲೆಂಡ್ನ ಡಬ್ಲಿನ್ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದ ನಂತರ ಡಜನ್ಗಟ್ಟಲೆ ಜನರು ಯುರೋಪ್ನಲ್ಲಿ ಸಿಲುಕಿದ್ದರು.
0 التعليقات: