Saturday, 1 January 2022

ಹಿಜಾಬ್ ಧರಿಸಲು ಅವಕಾಶ ಕಲ್ಪಿಸದಿದ್ದರೆ ಪ್ರತಿಭಟನೆ, ಕಾನೂನು ಹೋರಾಟ: ಮಸೂದ್ ಮನ್ನಾ

ಹಿಜಾಬ್ ಧರಿಸಲು ಅವಕಾಶ ಕಲ್ಪಿಸದಿದ್ದರೆ ಪ್ರತಿಭಟನೆ, ಕಾನೂನು ಹೋರಾಟ: ಮಸೂದ್ ಮನ್ನಾ

ಉಡುಪಿ: ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿ ಹಾಜರಾಗಲು ಅವಕಾಶ ನಿರಾಕರಿಸಲಾಗಿದ್ದು, ಇದರ ವಿರುದ್ಧ ಉಗ್ರ ಪ್ರತಿಭಟನೆ ಹಾಗೂ ಕಾನೂನು ಹೋರಾಟ ನಡೆಸಲಾಗುವುದು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಸಮಿತಿ ಸದಸ್ಯ ಮಸೂದ್ ಮನ್ನಾ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲೇಜಿನಲ್ಲಿ ಈ ಹಿಂದಿನಿಂದಲೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುತ್ತಿದ್ದರು. ಈ ಮೊದಲು ಹಿಜಾಬ್ ಧರಿಸಲು ಅವಕಾಶ ಇಲ್ಲದಿದ್ದರೂ ಇದೀಗ ತೀವ್ರವಾಗಿದೆ. ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿದ ಕಾರಣ ಅವರನ್ನು ತರಗತಿಯಿಂದ ಹೊರ ಹಾಕಲಾಗಿದೆ. ಇದು ಧಾರ್ಮಿಕ ತಾರತಮ್ಯವಾಗಿದೆ ಎಂದರು.

ಇತರ ಯಾವುದೇ ಸರಕಾರಿ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಈ ರೀತಿಯ ನಿರ್ಬಂಧ ಇಲ್ಲ. ಇಲ್ಲಿನ ಕೋಮು ಸೌರ್ಹಾದತೆ ಕೆಡಿಸುವ ಉದ್ದೇಶದಿಂದ ಈ ರೀತಿ ವಿವಾದ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ಪ್ರಾಂಶು ಪಾಲರು, ಡಿಡಿಪಿಯು ಅವರ ಹಿಂದೆ ಕಾಣದ ಶಕ್ತಿಯೊಂದು ಕೆಲಸ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಕಾಲೇಜಿನ ಪ್ರಾಂಶುಪಾಲರನ್ನು ವಜಾಗೊಳಿಸಬೇಕು. ಅದಲ್ಲದೇ ಪ್ರಾಧ್ಯಾಪಕರು ಹಾಜರಾತಿ ನೀಡದ ಕಾರಣ ಅವರ ಮೇಲೂ ಕಠಿಣ ಕ್ರಮ ಜರಗಿಸಬೇಕು. ಅಲ್ಲಿ ನಡೆಯುತ್ತಿರುವ ಧಾರ್ಮಿಕ ತಾರತಮ್ಯವನ್ನು ನಿಲ್ಲಿಸಿ ವಿದ್ಯಾರ್ಥಿನಿಯರಿಗೆ ನ್ಯಾಯ ದೊರಕಬೇಕು. ಇಲ್ಲದಿದ್ದರೆ ತೀವ್ರ ರೀತಿಯ ಹೋರಾಟವನ್ನು ಎದುರಿಸಬೇಕಾಗಬಹುದು ಎಂದು ಅವರು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಿಎಫ್‌ಐ ಜಿಲ್ಲಾಧ್ಯಕ್ಷ ಅಸೀಲ್ ಅಕ್ರಮ್, ಉಪಾಧ್ಯಕ್ಷೆ ಝಮ್ ಝಮ್, ವಿದ್ಯಾರ್ಥಿನಿಯರಾದ ಆಲಿಯಾ ಅಸದಿ, ಅಲ್ಮಸ್, ಆಯಿಷಾ ಮತ್ತು ಅವರ ಪೋಷಕರು ಹಾಜರಿದ್ದರು.

''ಈ ಕಾಲೇಜಿನಲ್ಲಿ ಬೇರೆ ಧರ್ಮದ ಎಲ್ಲ ರೀತಿಯ ಆಚರಣೆಯನ್ನು ಮಾಡಲಾಗುತ್ತಿದೆ. ಆದರೆ ಮುಸ್ಲಿಮ್ ವಿದ್ಯಾರ್ಥಿಗಳು ಮಾತ್ರ ತಮ್ಮ ಧರ್ಮವನ್ನು ಪಾಲಿಸಬಾರದು ಎಂದು ನಿರ್ಬಂಧ ಹೇರಲಾಗುತ್ತದೆ. ಬೇರೆ ಧರ್ಮದ ಯಾವುದೇ ಆಚರಣೆಗೂ ನಮ್ಮ ವಿರೋಧ ಇಲ್ಲ. ನಮಗೆ ನ್ಯಾಯ ಸಿಗುವವರೆಗೆ ನಾವು ಹೋರಾಟದಿಂದ ಹಿಂದೆ ಸರಿಯಲ್ಲ''

- ಆಲಿಯಾ ಅಸದಿ, ವಿದ್ಯಾರ್ಥಿನಿ

''ನಮ್ಮ ಕಾಲೇಜಿನಲ್ಲಿ 60 ಮಂದಿ ಮುಸ್ಲಿಮ್ ವಿದ್ಯಾರ್ಥಿನಿಯರಿದ್ದಾರೆ. ಅವರು ಕೂಡ ಹಿಜಾಬ್ ಧರಿಸಲು ಮುಂದೆ ಬಂದಿದ್ದರು. ಆದರೆ ಪ್ರಾಂಶುಪಾಲರು ನಮ್ಮನ್ನು ಹೊರಗೆ ಹಾಕಿರುವುದರಿಂದ ಹೆದರಿ ಅವರು ಇದರಿಂದ ಹಿಂದೇಟು ಹಾಕಿದ್ದಾರೆ. ನಮ್ಮ ಪೋಷಕರು ಎಲ್ಲರು ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ''

ಅಲ್ಮಸ್, ಆಯಿಷಾ, ವಿದ್ಯಾರ್ಥಿನಿಯರು


SHARE THIS

Author:

0 التعليقات: