Thursday, 6 January 2022

ದೇಶದಲ್ಲಿ ಏಳು ತಿಂಗಳ ಬಳಿಕ ಮತ್ತೆ ಲಕ್ಷ ದಾಟಿದ ಕೋವಿಡ್ ಪ್ರಕರಣ


ದೇಶದಲ್ಲಿ ಏಳು ತಿಂಗಳ ಬಳಿಕ ಮತ್ತೆ ಲಕ್ಷ ದಾಟಿದ ಕೋವಿಡ್ ಪ್ರಕರಣ

ಹೊಸದಿಲ್ಲಿ: ದೇಶಕ್ಕೆ ಒಮೈಕ್ರಾನ್ ಪ್ರಭೇದದ ವೈರಸ್ ಸೋಂಕು ಕಾಲಿಟ್ಟ ಬೆನ್ನಲ್ಲೇ ದೇಶದಲ್ಲಿ ಕೋವಿಡ್-19 ಅಲೆ ಸ್ಫೋಟಗೊಂಡಿದ್ದು, ಕೇವಲ ಎಂಟು ದಿನಗಳಲ್ಲಿ ದೈನಿಕ ಪ್ರಕರಣಗಳ ಸಂಖ್ಯೆ ಹತ್ತು ಪಟ್ಟು ಹೆಚ್ಚಿದೆ.

ಗುರುವಾರ ದೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು, ಏಳು ತಿಂಗಳ ಬಳಿಕ ಮತ್ತೆ ದೇಶದಲ್ಲಿ ಲಕ್ಷಕ್ಕಿಂತ ಅಧಿಕ ಪ್ರಕರಣ ಒಂದೇ ದಿನ ಪತ್ತೆಯಾಗಿದೆ.

2021ರ ಜೂನ್ 6ರಂದು ಅಂದರೆ 214 ದಿನಗಳ ಹಿಂದೆ ಭಾರತದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು. ಗುರವಾರ ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 1,16,964ಕ್ಕೇರಿದೆ. ಇನ್ನೂ ಒಂದು ರಾಜ್ಯದ ವರದಿ ಬರಬೇಕಿದೆ ಎಂದು ಟೈಮ್ಸ್ ಆಫ್ ಇಂಡಿಯಾ ದತ್ತಾಂಶ ವಿವರಿಸಿದೆ. ಬುಧವಾರ ದೇಶದಲ್ಲಿ 90,889 ಪ್ರಕರಣಗಳು ವರದಿಯಾಗಿದ್ದವು.

ದೇಶದಲ್ಲಿ ಮೊದಲ ಅಲೆಯಲ್ಲಿ 10 ಸಾವಿರದಿಂದ ಒಂದು ಲಕ್ಷ ಪ್ರಕರಣಗಳಿಗೆ ತಲುಪಲು 103 ದಿನಗಳಾಗಿದ್ದವು. ಎರಡನೇ ಅಲೆಯಲ್ಲಿ ಕೇವಲ 47 ದಿನಗಳಲ್ಲಿ ಈ ಹಂತ ತಲುಪಿತ್ತು. ಅಂದರೆ ಎರಡನೇ ಅಲೆಗಿಂತ ಐದು ಪಟ್ಟು ವೇಗದಲ್ಲಿ ಪ್ರಕರಣಗಳ ಸಂಖ್ಯೆ ಏರುತ್ತಿದೆ. ಎರಡನೇ ಅಲೆಯಲ್ಲಿ ದೈನಿಕ ಪ್ರಕರಣಗಳ ಸಂಖ್ಯೆ 4 ಲಕ್ಷದ ಗಡಿ ದಾಟಿತ್ತು.

ಡಿಸೆಂಬರ್ 28ರ ಬಳಿಕ ಪ್ರಕರಣಗಳ ಸಂಖ್ಯೆ ದಿನಕ್ಕೆ ಶೇಕಡ 35ರ ಸರಾಸರಿ ದರದಲ್ಲಿ ಹೆಚ್ಚಳವಾಗಿದೆ. ಗುರುವಾರ ದಾಖಲಾದ ಸಂಖ್ಯೆ, ಬುಧವಾರದ ಸಂಖ್ಯೆಗಿಂತ ಶೇಕಡ 29ರಷ್ಟು ಅಧಿಕ. ಏಕೈಕ ಧನಾತ್ಮಕ ಅಂಶವೆಂದರೆ ಸಾವಿನ ಸಂಖ್ಯೆ ಕಳೆದ ಕೆಲ ದಿನಗಳಿಂದ ಸ್ವಲ್ಪಮಟ್ಟಿಗೆ ಮಾತ್ರ ಹೆಚ್ಚುತ್ತಿದೆ. ಗುರುವಾರ ದೇಶದಲ್ಲಿ 97 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

ಒಂದೇ ದಿನ 86 ಸಾವಿರ ಸಕ್ರಿಯ ಪ್ರಕರಣಗಳ ಏರಿಕೆಯೊಂದಿಗೆ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3.5 ಲಕ್ಷವನ್ನು ದಾಟಿದೆ. ಡಿಸೆಂಬರ್ 21ರಂದು ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 75 ಸಾವಿರಕ್ಕಿಂತ ಕೆಳಗಿಳಿದಿತ್ತು. ಡಿಸೆಂಬರ್ 31ರಂದು ಸಕ್ರಿಯ ಪ್ರಕರಣಗಳ ಸಂಖ್ಯೆ ಲಕ್ಷದ ಗಡಿ ದಾಟಿದರೆ ಮುಂದಿನ ನಾಲ್ಕು ದಿನಗಳಲ್ಲಿ ಇದು 2 ಲಕ್ಷ ತಲುಪಿತ್ತು.SHARE THIS

Author:

0 التعليقات: