Thursday, 13 January 2022

ಹಳಿ ತಪ್ಪಿದ ಬಿಕನೇರ್-ಗುವಾಹಟಿ ಎಕ್ಸ್‌ಪ್ರೆಸ್ ರೈಲು: ಮೃತರ ಸಂಖ್ಯೆ 9ಕ್ಕೆ ಏರಿಕೆ.


ಹಳಿ ತಪ್ಪಿದ ಬಿಕನೇರ್-ಗುವಾಹಟಿ ಎಕ್ಸ್‌ಪ್ರೆಸ್ ರೈಲು: 
ಮೃತರ ಸಂಖ್ಯೆ 9ಕ್ಕೆ ಏರಿಕೆ.

ಜಲಪೈಗುರಿ (ಬಂಗಾಳ): ಗುವಾಹತಿಗೆ ಹೊರಟಿದ್ದ ಬಿಕನೇರ್ ಎಕ್ಸ್‌ಪ್ರೆಸ್ ರೈಲು ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯಲ್ಲಿ ಹಳಿ ತಪ್ಪಿ ಸಂಭವಿಸಿದ ದುರಂತದಲ್ಲಿ 9 ಪ್ರಯಾಣಿಕರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಉತ್ತರ ಬಂಗಾಳದಲ್ಲಿ ನಿನ್ನೆ ಸಂಭವಿಸಿದ ರೈಲು ಅಪಘಾತದಲ್ಲಿ ಸಾವಿನ ಸಂಖ್ಯೆ ಒಂಬತ್ತಕ್ಕೆ ಏರಿದೆ ಹಾಗೂ 36 ಜನರು ಆಸ್ಪತ್ರೆಗಳಲ್ಲಿದ್ದಾರೆ. ಹಳಿ ತಪ್ಪಿದ ಬೋಗಿಗಳಲ್ಲಿ ಹೆಚ್ಚಿನ ಪ್ರಯಾಣಿಕರು ಸಿಕ್ಕಿಹಾಕಿಕೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಇಂದು ಅಪಘಾತ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

"ಅಪಘಾತ ಸಂಭವಿಸಿದ ಸ್ಥಳದ ಕಡೆಗೆ ಹೋಗುತ್ತಿದ್ದೇನೆ" ಎಂದು ವೈಷ್ಣವ್ ಅವರು ಕಳೆದ ರಾತ್ರಿ ಟ್ವೀಟ್ ಮಾಡಿದ್ದಾರೆ.

ಗಾಯಗೊಂಡಿರುವ ಆರು ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿದ್ದು, ಸಿಲಿಗುರಿಯ ಉತ್ತರ ಬಂಗಾಳ ವೈದ್ಯಕೀಯ ಕಾಲೇಜು ಹಾಗೂ  ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದವರು ಜಲ್ಪೈಗುರಿ ಮತ್ತು ಮೇನಗುರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೈಲು ಅಪಘಾತದಲ್ಲಿ ಪ್ರಯಾಣಿಕರು ಜೀವ ಕಳೆದುಕೊಳ್ಳುತ್ತಿರುವುದು ಕಳೆದ 34 ತಿಂಗಳಲ್ಲಿ ಇದೇ ಮೊದಲು.

ಇದಕ್ಕೂ ಮುನ್ನ 2019ರ ಮಾರ್ಚ್ 22ರಂದು ಸಂಭವಿಸಿದ ರಯಲು ಅಪಘಾತದಲ್ಲಿ ಪ್ರಯಾಣಿಕರು ಮೃತಪಟ್ಟಿದ್ದರು. ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ.ತ್ರಿಪಾಠಿ ಮತ್ತು ಸುರಕ್ಷತಾ ವಿಭಾಗದ ಮಹಾ ನಿರ್ದೇಶಕರು ಸ್ಥಳಕ್ಕೆ ಧಾವಿಸಿದ್ದಾರೆ. ಪರಿಸ್ಥಿತಿಯ ವೀಕ್ಷಣೆಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಕೂಡಾ ಸ್ಥಳಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಬುಡಮೇಲಾದ ಬೋಗಿಗಳಿಂದ ಕನಿಷ್ಠ 250 ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಇನ್ನೂ ಕೆಲವು ಮಂದಿ ನುಜ್ಜುಗುಜ್ಜಾದ ಬೋಗಿಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಇದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯೆ ಇದೆ. 1053 ಪ್ರಯಾಣಿಕರು ಈ ರೈಲಿನಲ್ಲಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಕನಿಷ್ಠ 10 ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ವಿವರಿಸಿದ್ದಾರೆ.

ರೈಲು ಹಳಿ ತಪ್ಪಿದಾಗ ರೈಲು 40 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿತ್ತು. ಸಂಜೆ 4.53ರ ವೇಳೆಗೆ ದೊಮೊಹನಿ ನಿಲ್ದಾಣದಿಂದ ನ್ಯೂ ಮೈನಗುರಿ ನಿಲ್ದಾಣದತ್ತ ಹೊರಟ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಅಸ್ಸಾಂನಲ್ಲಿ ಭೋಗಿ ಬಿಹು ಹಬ್ಬದ ಆಚರಣೆಗಾಗಿ ಬಹುತೇಕ ಪ್ರಯಾಣಿಕರು ಅಸ್ಸಾಂಗೆ ಮರಳುತ್ತಿದ್ದರು ಎನ್ನಲಾಗಿದೆ. ಕೋವಿಡ್ ಕಾರಣದಿಂದಾಗಿ ರೈಲಿನಲ್ಲಿ ಕಡಿಮೆ ಸಂಖ್ಯೆಯ ಪ್ರಯಾಣಿಕರು ಇದ್ದರು ಎಂದು ರೈಲು ಅಧಿಕಾರಿಗಳು ಹೇಳಿದ್ದಾರೆ.

ರೈಲು ಹಳಿಯಲ್ಲಿ ಬಿರುಕು ಇದ್ದುದು ದುರಂತಕ್ಕೆ ಕಾರಣ ಎನ್ನಲಾಗಿದೆ. ಈ ಭಾಗದಲ್ಲಿ ಹಳಿ ದುರಸ್ತಿ ಕಾರ್ಯ ನಡೆಯುತ್ತಿತ್ತು. ಘಟನೆ ಬಗ್ಗೆ ಉನ್ನತ ಮಟ್ಟದ ರೈಲ್ವೆ ಸುರಕ್ಷತಾ ವಿಚಾರಣೆಗೆ ಆದೇಶಿಸಲಾಗಿದೆ.SHARE THIS

Author:

0 التعليقات: