ಮಣಿಪುರ ಚುನಾವಣೆ: ಎಲ್ಲಾ 60 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ
ಹೊಸದಿಲ್ಲಿ: ಮುಂಬರುವ ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಎಲ್ಲಾ 60 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಕೇಂದ್ರ ಸಚಿವ ಭೂಪೇಂದರ್ ಯಾದವ್ ರವಿವಾರ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ನಾಯಕ, ಪಕ್ಷವು 2/3 ಕ್ಕಿಂತ ಹೆಚ್ಚು ಬಹುಮತದೊಂದಿಗೆ ಸರಕಾರವನ್ನು ರಚಿಸುತ್ತದೆ ಎಂದು ಹೇಳಿದರು.
ಆಡಳಿತಾರೂಢ ಬಿಜೆಪಿಯು ಸಣ್ಣಪುಟ್ಟ ಪಕ್ಷಗಳೊಂದಿಗೆ ಚುನಾವಣಾ ಪೂರ್ವ ಮೈತ್ರಿಯ ಕುರಿತು ಚರ್ಚಿಸುತ್ತಿರುವುದಾಗಿ ಅಸ್ಸಾಂ ಸಚಿವ ಹಾಗೂ ಮಣಿಪುರ ರಾಜ್ಯ ಚುನಾವಣೆಯ ಉಸ್ತುವಾರಿ ಅಶೋಕ್ ಸಿಂಘಾಲ್ ಇತ್ತೀಚೆಗೆ ಹೇಳಿದ್ದರು.
ಮಣಿಪುರದಲ್ಲಿ ಫೆಬ್ರವರಿ 27 ಹಾಗೂ ಮಾ.3ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.
ರಾಜ್ಯ ಸರಕಾರದಲ್ಲಿ ಬಿಜೆಪಿಯ ಮೈತ್ರಿ ಪಕ್ಷ ನ್ಯಾಶನಲ್ ಪೀಪಲ್ಸ್ ಪಾರ್ಟಿ(ಎನ್ ಪಿಪಿ)ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಈಗಾಗಲೇ ಸುಳಿವು ನೀಡಿದೆ.
0 التعليقات: